ಇಬ್ಬರು ಮಕ್ಕಳು, ಪತ್ನಿಯನ್ನು ಕೊಂದು ವೈದ್ಯ ಆತ್ಮಹತ್ಯೆ…

51
firstsuddi

ಲಕ್ನೋ: ವೈದ್ಯನೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯ ಲಾಲ್‍ಗಂಜ್‍ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವೈದ್ಯನನ್ನು ಅರುಣ್ ಕುಮಾರ್ ಸಿಂಗ್ (45) ಎಂದು ಗುರುತಿಸಲಾಗಿದೆ. ಇವರು ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿ ಆಸ್ಪತ್ರೆಯ ನೇತ್ರ ತಜ್ಞರಾಗಿದ್ದರು.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಆಸ್ಪತ್ರೆಯ ಸಂಕೀರ್ಣದ ಒಳಗೆಯೇ ಇರುವ ಮನೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

ಮನೆಯ ಬಾಗಿಲನ್ನು ತೆರೆದಾಗ ಅರುಣ್ ಪತ್ನಿ ಅರ್ಚನಾ (40) ಮಕ್ಕಳಾದ ಅರಿಬಾ (12) ಹಾಗೂ ಆರವ್ (4) ಶವವಾಗಿ ಪತ್ತೆಯಾಗಿದ್ದಾರೆ. ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೊದಲು ಚುಚ್ಚುಮದ್ದು ನೀಡುವ ಮೂಲಕ ಹೆಂಡತಿ ಹಾಗೂ ಮಕ್ಕಳನ್ನು ಪ್ರಜ್ಞಾಹೀನರನ್ನಾಗಿ ಮಾಡಿ ಬಳಿಕ ಕೊಂದಿದ್ದಾನೆ. ನಂತರ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸಿಂಗ್‌ನ ನೆರೆಹೊರೆಯವರ ಪ್ರಕಾರ ಆತನ ಕುಟುಂಬದವರು 2 ದಿನಗಳ ಹಿಂದೆ ಭಾನುವಾರ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಇನ್ನೂ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.