ಇ-ಖಾತಾ ಮಾಡಿಸಲು ಡೆಡ್ ಲೈನ್ ನೀಡಿಲ್ಲ, ಆತಂಕ ಬೇಡ: ಸಚಿವ ಕೃಷ್ಣ ಬೇರೇಗೌಡ ಸ್ಪಷ್ಟನೆ.

47

ಬೆಂಗಳೂರು: ರಾಜ್ಯದಲ್ಲಿ ನಿವೇಶನ ಮಾರಾಟದಲ್ಲಿ ಆಗುತ್ತಿರುವ ವಂಚನೆ ತಡೆಗಟ್ಟುವ ಹಿನ್ನೆಲೆಯಲ್ಲಿ ಇ.ಖಾತೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಯಾವುದೇ ಡೆಡ್ ಲೈನ್ ವಿಧಿಸಿಲ್ಲ. ಹೀಗಾಗಿ ಸಾರ್ವಜನಿಕರು ಆತುರ ಪಡುವ ಅಗತ್ಯ ಇಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸೋಮವಾರ ಹೇಳಿದರು. ಇ-ಖಾತಾ ಬಗೆಗಿನ ಗೊಂದಲಗಳ ಬಗ್ಗೆ ಸೋಮವಾರ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬಳಿಕ ವಿಕಾಸಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಚಿವರು ಮಾತನಾಡಿದರು. ಬಿಬಿಎಂಪಿ ವ್ಯಾಪ್ತಿಯ ಕೆಲವು ಭಾಗದಲ್ಲಿ ಮಧ್ಯವರ್ತಿಗಳು ಇ-ಖಾತಾ ಗೆ ಸರ್ಕಾರ ಸಮಯ ನಿಗದಿ ಮಾಡಿದೆ ಎಂದು ಜನರಲ್ಲಿ ಗೊಂದಲ ಸೃಷ್ಟಿಸಿ, ಇ-ಖಾತೆ ಮಾಡಿಸಿಕೊಡುವುದಾಗಿ ಜನರನ್ನು ಸುಲಿಗೆ ಮಾಡಿರುವ ಘಟನೆ ಗಮನಕ್ಕೆ ಬಂದಿದೆ. ಆದರೆ, ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಸರ್ಕಾರ ಯಾವುದೇ ಸಮಯ ನಿಗದಿ ಮಾಡಿಲ್ಲ. ಹೀಗಾಗಿ, ಸಾರ್ವಜನಿರಕರು ಗಾಬರಿಗೊಳಗಾಗದೆ, ಆತುರಪಡದೆ ತಮ್ಮ ಸಮಯ ನೋಡಿಕೊಂಡು ಇ-ಖಾತಾ ಮಾಡಿಸಿಕೊಳ್ಳಬಹುದು. ಊಹಾಪೋಹಗಳಿಗೆ ಕಿವಿಕೊಟ್ಟು ಆತಂಕಕ್ಕೆ ಒಳಗಾಗಬೇಡಿ ಎಂದು ಗೊಂದಲಕ್ಕೆ ತೆರೆ ಎಳೆದರು. ನಕಲಿ ನೋಂದಣಿ ಪ್ರಕರಣಗಳನ್ನು ತಡೆಯೊಡ್ಡುವ ಸಲುವಾಗಿಯೇ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಇ-ಖಾತಾ ಪಡೆಯಲು ಆತುರ ಬೇಕಿಲ್ಲ. ನಿವೇಶನಗಳನ್ನು ಮಾರುವ ಅಥವಾ ಕೊಳ್ಳುವ ಪ್ರಕ್ರಿಯೆಯಲ್ಲಿ ಮಾತ್ರ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಅಲ್ಲದೆ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ಪಾಲಿಕೆಯ ವಿಶೇಷ ಆಯುಕ್ತರ ಜೊತೆ ಚರ್ಚಿಸಿ ಇ-ಖಾತಾ ಪ್ರಕ್ರಿಯೆಯನ್ನೂ ಸರಳೀಕರಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.