ಈ ಬಾರಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕಿಲ್ಲ ಅವಕಾಶ…

46
firstsuddi

ಬೆಂಗಳೂರು: ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಇರಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

2023ರ ಗಣರಾಜ್ಯೋತ್ಸವದಂದು ಕರ್ನಾಟಕವು ರಾಗಿ ವೈವಿಧ್ಯತೆಯ ಕುರಿತು ಪ್ರದರ್ಶನ ನೀಡುವುದಾಗಿ ಸಲ್ಲಿಸಿದ್ದ ಪ್ರಸ್ತಾಪವನ್ನು ಕೇಂದ್ರವು ತಿರಸ್ಕರಿಸಿದೆ. ಇದರ ಪರಿಣಾಮವಾಗಿ ಜನವರಿ 26ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ವರ್ಣರಂಜಿತ ಗಣರಾಜ್ಯೋತ್ಸವ ದಿನದಂದು ಪರೇಡ್ ನಲ್ಲಿ ಪ್ರತಿನಿಧಿಸುತ್ತಿಲ್ಲ ಎಂದು ತಿಳಿಸಿದರು.

ತಮಿಳುನಾಡು, ಕೇರಳ ಸೇರಿ ಈ ಬಾರಿ ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಅಂತಿಮ ಹಂತದಲ್ಲಿ ಕರ್ನಾಟಕ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ.

ಕಳೆದ ವರ್ಷ ದೆಹಲಿಯ ರಾಜಪಥ್ ನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್ ನಲ್ಲಿ ಭಾಗವಹಿಸಿದ್ದ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳಗಳ ತೊಟ್ಟಿಲು ವಿಷಯಧಾರಿತ ರಾಜ್ಯದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ ಸಿಕ್ಕಿತ್ತು. ಸತತ 13 ವರ್ಷಗಳಿಂದ ಪ್ರದರ್ಶನಗೊಳ್ಳುತ್ತ ಬಂದಿದ್ದ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಈ ವರ್ಷ ಅವಕಾಶ ಸಿಕ್ಕಿಲ್ಲ.

ಪ್ರತಿಬಾರಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ರಾಜ್ಯದ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ತಪ್ಪಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.