ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು : ಮಿಥುನ್ ರೈ ವಿವಾದಾತ್ಮಕ ಹೇಳಿಕೆ…

47
firstsuddi

ಉಡುಪಿ : ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಪ್ತ ಮಿಥುನ್ ರೈ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುತ್ತಿಗೆಯಲ್ಲಿ ನಡೆದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮಿಥುನ್ ರೈ ಹೇಳಿಕೆಗೆ ಬಿಜೆಪಿ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ. ಭಾರತ ಹೆಸರು ಕೊಟ್ಟಿದ್ದು ಮುಸ್ಲಿಂರು ಅಂತ ಹೇಳಿದರು ಅಚ್ಚರಿ ಇಲ್ಲ ಎಂದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿ.ಟಿ ರವಿ, ಕೇವಲ ಕೃಷ್ಣ ಮಠ ಅಲ್ಲ, ‘ಭಾರತ’ ಹೆಸರು ಕೊಟ್ಟಿದ್ದು ಮುಸಲ್ಮಾನರು. ಮುಸಲ್ಮಾನ ದೊರೆಗಳೇ ರಾಮಮಂದಿರ ನಿರ್ಮಾಣ ಮಾಡಿದ್ದು. ಮುಸಲ್ಮಾನ ದೊರೆಗಳೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದು. ಕಾಂಗ್ರೆಸ್ ನವರು ಹೀಗೆ ಹೇಳಿದರೂ ನಾವೆಲ್ಲಾ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದರು.

ಸುಳ್ಳು ಮತ್ತು ಕಾಂಗ್ರೆಸ್ ಒಂದು ನಾಣ್ಯದ 2 ಮುಖಗಳು. ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಅವರಿಗಿರುವ ಕಾಯಿಲೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಮಿಥುನ್​ ರೈ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಬಂದಿದ್ದ ವರದಿ ನೋಡಿ ನಾನು ಹೇಳಿಕೆ ನೀಡಿದ್ದೇನೆ. ನಾನು ಸೌಹಾರ್ದಯುತ ಹೇಳಿಕೆ ನೀಡಿದ್ದೇನೆ ಎಂದು ಹೇಳಿದ್ದಾರೆ.