ಬೆಂಗಳೂರು: ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಟ್ವಿಟ್ಟರ್ನಲ್ಲಿ ಅವಾಚ್ಯ ಪದಗಳನ್ನು ಬಳಸಿ ಪೋಸ್ಟ್ ಹಾಕಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಶಕುಂತಲಾರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉಡುಪಿಯ ಖಾಸಗಿ ಕಾಲೇಜೊಂದರಲ್ಲಿ ಶೌಚಾಲಯದಲ್ಲಿ ಕೆಲ ವಿದ್ಯಾರ್ಥಿನಿಯರು ಮೊಬೈಲ್ ಇಟ್ಟು ಮತ್ತೊಬ್ಬ ವಿದ್ಯಾರ್ಥಿನಿಯ ವೀಡಿಯೋ ಸೆರೆ ಹಿಡಿದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿನಿಯರ ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ತನಿಖೆಗೆ ರವಾನಿಸಲಾಗಿದೆ.
ವೀಡಿಯೋ ಚಿತ್ರೀಕರಣ ವಿಚಾರ ಕಾಲೇಜು ಆಡಳಿತ ಮಂಡಳಿಗೆ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿಯರನ್ನು ಕರೆಸಿ ಬುದ್ದಿಮಾತು ಹೇಳಿ, ವೀಡಿಯೋ ಡಿಲೀಟ್ ಮಾಡಿಸಲಾಗಿದೆ. ಅಷ್ಟೇ ಅಲ್ಲದೇ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಕಾಲೇಜು ತಿಳಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವ್ಯಾಪಕ ಪ್ರತಿಭಟನೆ ನಡೆಸುತ್ತಿದೆ.
ಬಿಜೆಪಿ ಕಚೇರಿಯಿಂದ ಎಸ್ಪಿ ಕಚೇರಿವರೆಗೂ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳನ್ನು ಡಿಬಾರ್ ಮಾಡಬೇಕು. ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.










