ಉತ್ತರಪ್ರದೇಶದ ಅಲಿಗಢ ಕಾಲೇಜಿನಲ್ಲಿ ಸಮವಸ್ತ್ರ ಶಿಷ್ಟಾಚಾರ ಕಡ್ಡಾಯ…

76
firstsuddi

ಲಕ್ನೋ : ಕರ್ನಾಟಕದಲ್ಲಿ ಹಬ್ಬಿರುವ ಹಿಜಾಬ್ ವಿವಾದ ಇದೀಗ ಉತ್ತರಪ್ರದೇಶದಲ್ಲೂ ಪ್ರತಿಧ್ವನಿಸಿದೆ. ಅಲಿಗಢ ಧರ್ಮ ಸಮಾಜ ಕಾಲೇಜು ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಆದೇಶ ಪ್ರಕಟಿಸಿದೆ.

ಮುಖ ಮುಚ್ಚಿರುವ ವಸ್ತ್ರವನ್ನು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬರಬಾರದು. ಅಂದರೆ ಕೇಸರಿ ವಸ್ತ್ರವನ್ನಾಗಲಿ ಅಥವಾ ಹಿಜಾಬ್ ವಸ್ತ್ರವನ್ನಾಗಲಿ ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಧರ್ಮ ಸಮಾಜ ಕಾಲೇಜು ಆಡಳಿತ ಮಂಡಳಿ ನಿನ್ನೆ ನೋಟಿಸ್ ಬೋರ್ಡ್ ನಲ್ಲಿ ಸೂಚನೆ ಪ್ರಕಟಿಸಿದೆ.

ಕಳೆದ ವಾರ ಉಡುಪಿ ಕಾಲೇಜಿನ ವಿದ್ಯಾರ್ಥಿಗಳನ್ನು ಬೆಂಬಲಿಸಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರತಿಭಟನೆ ನಡೆದ ಬೆನ್ನಲ್ಲೇ ಸೋಮವಾರ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ತರಗತಿಗೆ ಆಗಮಿಸಿದ್ದರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಆದೇಶ ಪ್ರಕಟಿಸಬೇಕೆಂದು ಮನವಿ ಮಾಡಿದ್ದರು.