ಉದ್ಘಾಟನೆಗೊಂಡ ಮೂರೇ ತಿಂಗಳಿಗೆ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಚಿಕ್ಕೋಡಿ ಸೇತುವೆ ಕುಸಿತ.

40

ಅಥಣಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ 6.50 ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಇತ್ತೀಚೆಗೆ ನಿರ್ಮಿಸಲಾದ ಮಾಂಜರಿ-ಬವನಸೌಂದತ್ತಿ ಸೇತುವೆ-ಕಮ್-ಬ್ಯಾರೇಜ್ ಉದ್ಘಾಟನೆಗೊಂಡ ಮೂರು ತಿಂಗಳ ನಂತರ ಕುಸಿದಿದ್ದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಪ್ರಬಲವಾದ ನದಿ ಪ್ರವಾಹ ತಡೆಯದ ಸೇತುವೆ ಕುಸಿದಿದೆ ಎಂದು ಆರೋಪಿಸಿದ್ದಾರೆ. ರಾಯಬಾಗ, ಚಿಂಚಲಿ, ಕುಡಚಿ, ದಿಗ್ಗೇವಾಡಿ ಮುಂತಾದ ಹಲವಾರು ಗಡಿ ಗ್ರಾಮಗಳಿಗೆ ಸಂಪರ್ಕ ಸುಧಾರಿಸುವ ಉದ್ದೇಶದಿಂದ ಸೇತುವೆ ನಿರ್ಮಾಣ ಮಾಡಲಾಯಿತು, ಆದರೆ ಈಗ ಸಂಪೂರ್ಣ ನಿರುಪಯುಕ್ತವಾಗಿದೆ. ಸೇತುವೆ ಕುಸಿತದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಸಂಪರ್ಕವನ್ನು ಮರುಸ್ಥಾಪಿಸಲು ತಕ್ಷಣ ದುರಸ್ತಿ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಿದ್ಧಾರ್ಥ್ ಗಾಯೋಗೋಳ್ ಒತ್ತಾಯಿಸಿದ್ದಾರೆ. ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಅಥಣಿಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ ಎಸ್ ಲಮಾಣಿ ಮಾತನಾಡಿ, ಸಂತ್ರಸ್ತ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಶೀಘ್ರವೇ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.