ಉದ್ಯಮಿ ಕೆಜಿಎಫ್ ಬಾಬುಗೆ ಐಟಿ ಶಾಕ್…

78
firstsuddi

ಬೆಂಗಳೂರು: ಉದ್ಯಮಿ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ನಿವಾಸ ಸೇರಿ 7 ಕಡೆಗಳಲ್ಲಿ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ವಸಂತ ನಗರದಲ್ಲಿರುವ ಬಾಬು ನಿವಾಸದಲ್ಲಿ ಐಟಿ ಅಧಿಕಾರಿಗಳು ಮಹತ್ವದ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಅತ್ತ ಕೆಜಿಎಫ್ ಬಾಬುಗೆ ಸೇರಿದ ಕಚೇರಿಗಳಲ್ಲೂ ಪರಿಶೀಲನೆ ನಡೆಯುತ್ತಿದೆ.

ಬೆಳ್ಳಂಬೆಳಗ್ಗೆಯೇ 6 ಕಾರುಗಳಲ್ಲಿ 3 ತಂಡವಾಗಿ ಬಂದಿರುವ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಉದ್ಯಮಿ ಕೆಜಿಎಫ್ ಬಾಬು ನಿವಾಸ ಹಾಗೂ ಕಚೇರಿಗಳಲ್ಲಿ ದಾಳಿ ನಡೆಸಿದ್ದಾರೆ. ಆದಾಯ ತೆರಿಗೆಯಲ್ಲಿ ವ್ಯತ್ಯಯ ಶಂಕೆ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆಸಿದೆ.

ಬಾಬು ಅವರ ವಸಂತನಗರದ ರುಕ್ಸಾನಾ ಪ್ಯಾಲೇಸ್ ನಿವಾಸ, ಉಮ್ರಾ ಡೆವಲಪರ್ಸ್ ಕಚೇರಿ, ಹಾಗೂ ರಿಯಲ್ ಎಸ್ಟೇಟ್ ಕಚೇರಿಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಆದಾಯದ ಮೂಲಗಳು, ವ್ಯವಹಾರದ ಮೌಲ್ಯ, ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಒಡೆಯನಾಗಿರುವ ಕೆಜಿಎಫ್ ಬಾಬು ಕಳೆದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ನಾಮಪತ್ರ ಸಲ್ಲಿಸುವಾಗ 1741 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು.