ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕ ಸಾವು…

47
firstsuddi

ಮಂಗಳೂರು: ಮನೆಯಲ್ಲಿ ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಶ್ರೀಷಾ(14) ಎಂದು ಗುರುತಿಸಲಾಗಿದ್ದು, ಈತ 8 ನೇ ತರಗತಿಯಲ್ಲಿ ಓದುತ್ತಿದ್ದನು. ನಿನ್ನೆ ರಜೆ ಇದ್ದಿದ್ದರಿಂದ ಬಾಲಕ ಮನೆ ಅಂಗಳದಲ್ಲಿ ಸೀರೆಯಲ್ಲಿ ಮಾಡಿದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದನು.

ಹೀಗೆ ಆಟವಾಡುತ್ತಿದ್ದಾಗ ಸೀರೆ ಆಕಸ್ಮಿಕವಾಗಿ ಶ್ರೀಷಾ ಕುತ್ತಿಗೆಗೆ ಬಿಗಿದಿದೆ. ಪರಿಣಾಮ ಆತ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಪೋಷಕರು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಬಾಲಕನ ಶವವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಧನರಾಜ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.