ಎಂಜಿಲು ಪ್ಲೇಟ್ ತಾಗಿತೆಂದು ವೇಯ್ಟರ್​ನ್ನೇ ಹೊಡೆದು ಕೊಂದ ಅತಿಥಿಗಳು…

57
firstsuddi

ಲಕ್ನೋ: ಎಂಜಿಲು ಪ್ಲೇಟ್ ತಾಗಿತೆಂಬ ಕಾರಣಕ್ಕೆ ಮದುವೆ ಮನೆಯಲ್ಲಿ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ.

ಅಂಕುರ್ ವಿಹಾರ್ ಸಿಜಿಎಸ್ ವಾಟಿಕಾದಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಪಂಕಜ್ ಹತ್ಯೆಯಾದ ವ್ಯಕ್ತಿ. ನವೆಂಬರ್ 17ರಂದು ಮದುವೆ ಸಮಾರಂಭವೊಂದರಲ್ಲಿ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಪಂಕಜ್ ಅವರ ಬಳಿಯಿದ್ದ ಎಂಜಿಲು ಪ್ಲೇಟ್‌ಗಳು ಅತಿಥಿಗಳಾಗಿ ಆಗಮಿಸಿದ್ದ ರಿಷಬ್ ಹಾಗೂ ಆತನ ಇಬ್ಬರು ಸ್ನೇಹಿತರ ಮೇಲೆ ಬಿದ್ದಿತ್ತು.

ಎಂಜಿಲು ಪ್ಲೇಟ್‌ಗಳು ತಮ್ಮ ಮೇಲೆ ಬಿದ್ದ ಪರಿಣಾಮ ರಿಷಬ್ ಸಿಟ್ಟಾಗಿ ವೇಯ್ಟರ್ ಪಂಕಜ್‌ನೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ಜಗಳ ಅತಿರೇಕಕ್ಕೆ ತಿರುಗಿ ಹೊಡೆದಾಟ ನಡೆದಿದ್ದು, ಈ ವೇಳೆ ಪಂಕಜ್‌ನನ್ನು ನೆಲಕ್ಕೆ ಬೀಳಿಸಿ ರಿಷಬ್ ಹೊಡೆದು ಕೊಂದಿದ್ದಾನೆ.

ಕೊಲೆ ಬಳಿಕ ಸಿಕ್ಕಿಬೀಳುವ ಭಯದಿಂದ ರಿಷಬ್ ಮತ್ತು ಅವನ ಸ್ನೇಹಿತರು ಶವವನ್ನು ಹತ್ತಿರದ ಕಾಡಿನಲ್ಲಿ ಬಚ್ಚಿಟ್ಟಿದಾರೆ. ಘಟನೆ ನಡೆದ ಒಂದು ದಿನದ ನಂತರ ಪೊಲೀಸರು ಪಂಕಜ್‌ನ ಶವವನ್ನು ವಶಪಡಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.