ಚಿಕ್ಕಬಳ್ಳಾಪುರ : ಎಣ್ಣೆ ಪಾರ್ಟಿಗೆಂದು ಕರೆದೊಯ್ದ ಸ್ನೇಹಿತರೇ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೀಗೆಹಳ್ಳಿ ಗ್ರಾಮದ ಬಳಿ ನಡೆದಿದೆ.
ಸೀಗೆಹಳ್ಳಿ ಗ್ರಾಮದ ಮೋಹನ್ (28) ಮೃತ ಯುವಕ. ಪ್ರಭಾಕರ್, ಸುಮನ್, ನಂದನ್ ಕೊಲೆ ಮಾಡಿರುವ ಆರೋಪಿಗಳು. ನಿನ್ನೆ ರಾತ್ರಿ ಎಣ್ಣೆ ಪಾರ್ಟಿಗೆ ಎಂದು ಗ್ರಾಮದ ಹೊರವಲಯದ ಗೆಜ್ಜಿಗಾನಹಳ್ಳಿ ಬಳಿಯ ನೀಲಗಿರಿ ತೋಪಿನ ನಿರ್ಜನ ಪ್ರದೇಶಕ್ಕೆ ಮೋಹನ್ ನನ್ನು ಕರೆದೊಯ್ದಿದ್ದಾರೆ. ಈ ವೇಳೆ ಮೋಹನ್ ನ ಕತ್ತಿಗೆ ಚಾಕುವಿನಿಂದ ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ವಿಷಯ ತಿಳಿದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಳೆ ವೈಷಮ್ಯದಿಂದ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.










