ಎತ್ತಿನಬಂಡಿಗೆ ಬೈಕ್ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ ಮೂರು ಮಂದಿ ದುರ್ಮರಣ.

43

ಹಾವೇರಿ: ಎತ್ತಿನಬಂಡಿಗೆ ಬೈಕ್ ಡಿಕ್ಕಿಯಾಗಿ ಬೈಕ್‍ನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ನಡೆದಿದೆ. ಶಶಿಕುಮಾರ ಉಪ್ಪಾರ, ಆಕಾಶ ಬಿರಾದಾರ ಮತ್ತು ದರ್ಶನ ಮೃತ ದುರ್ದೈವಿಗಳು. ಇಬ್ಬರು ವಿದ್ಯಾರ್ಥಿಗಳು ಸೇರಿ ಬೈಕ್‍ನಲ್ಲಿ ಮೂವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಜಾತ್ರೆಗೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇವರು ಹನುಮನಮಟ್ಟಿ ಗ್ರಾಮದಿಂದ ಮೈಲಾರ ಜಾತ್ರೆಗೆ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ. ಆಕಾಶ ಮತ್ತು ದರ್ಶನ ಮೂರನೇ ವರ್ಷದ ಬಿಎಸ್ಸಿ ಅಗ್ರಿ ಓದುತ್ತಿದ್ದರು. ಶಶಿಕುಮಾರ ಹನುಮನಮಟ್ಟಿ ಗ್ರಾಮದಲ್ಲಿ ಹೋಟೆಲ್ ಕೆಲಸ ಮಾಡುತ್ತಿದ್ದ. ತಡರಾತ್ರಿ ಎತ್ತಿನಬಂಡಿಗೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.