ಎನ್‍ಐಎ ದಾಳಿ ಖಂಡಿಸಿ ಕೇರಳದಲ್ಲಿ ಹಿಂಸಾಚಾರ ; ಪಿಎಫ್‍ಐ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿದ ಹೈಕೋರ್ಟ್.

72
firstsuddi

ತಿರುವನಂತಪುರ : ದೇಶಾದ್ಯಂತ ನಿನ್ನೆ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ ಐ) ಕಚೇರಿ ಮೇಲೆ ದಾಳಿ ನಡೆಸಿ ನಾಯಕರನ್ನು ಬಂಧಿಸಿತ್ತು. ಈ ಬಂಧನವನ್ನು ಖಂಡಿಸಿ ಪಿಎಫ್‍ಐ ಇಂದು ಕೇರಳ ಬಂದ್ ಗೆ ಕರೆ ನೀಡಿದ್ದು ಹಿಂಸಾಚಾರ ಆರಂಭವಾಗಿದೆ.

ತಿರುವನಂತಪುರಂ, ಕೊಲ್ಲಂ, ಕೊಝಿಕೋಡ್, ವೈನಾಡು ಮತ್ತು ಆಲಪ್ಪುಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೇರಳ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನ್ಯೂಸ್ ಪೇಪರ್ ಕೊಂಡೊಯ್ಯುತ್ತಿದ್ದ ವಾಹನವೊಂದರ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯದ ಪರಿಣಾಮ ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ. ರೈಲು ನಿಲ್ದಾಣಗಳಲ್ಲಿ ನೂರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಹಲವು ಶಾಲೆಗಳಿಗೆ ರಜೆ ಘೋಷಣೆಯಾಗಿವೆ.

ಯಾವುದೇ ಅನುಮತಿ ಪಡೆಯದೇ ಬಂದ್ ಕರೆ ಕೊಟ್ಟ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್ ಪಿಎಫ್ಐ ನಾಯಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ದಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.

ನಿನ್ನೆ ಪಿಎಫ್ ಐ ವಿರುದ್ಧ ಎನ್ ಐಎ 15 ರಾಜ್ಯಗಳ 93 ಸ್ಥಳಗಳಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ದೇಶಾದ್ಯಂತ ಸುಮಾರು 106 ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.