ಶಿವಮೊಗ್ಗ : ಎಬಿವಿಪಿ ಕಾರ್ಯಕರ್ತರು ತಮ್ಮ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪಿಎಫ್ ಐ, ಎಸ್ ಡಿಪಿಐ ಸೇರಿದಂತೆ ಮತೀಯ ಸಂಘಟನೆಗಳನ್ನು ನಿಷೇಧ ಮಾಡಬೇಕೆಂಬುದು ಅವರ ನಿಲುವಾಗಿದೆ. ನಮ್ಮ ಸರ್ಕಾರದ ಕಣ್ಣು ತೆರೆಯುವ ಕೆಲಸ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪ್ರವೀಣ್ ಹತ್ಯೆಗೆ ಸಂಬಂಧಿಸಿ ಸಂಪೂರ್ಣ ತನಿಖೆ ನಂತರ ಎಲ್ಲಾ ಬಹಿರಂಗ ಆಗುತ್ತದೆ. ಮಂಗಳೂರು ಇದೀಗ ಸಹಜ ಸ್ಥಿತಿಗೆ ಬಂದಿದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಘಟನೆ ನಡೆದಾಗ ಎನ್ ಕೌಂಟರ್ ಮಾಡಬೇಕು ಅನಿಸುವುದು ಸಹಜವಾದ್ದು, ಆದರೆ ಸಾವಿಗೆ ಮತ್ತೊಂದು ಸಾವು ಪರಿಹಾರವಲ್ಲ. ಯುಪಿಯೇ ಬೇರೆ, ಕರ್ನಾಟಕವೇ ಬೇರೆ. ಪ್ರಾಣ ತೆಗೆಯುವುದು, ರಕ್ತ ಹರಿಸುವುದು ಹುಡುಗಾಟದ ಮಾತಲ್ಲ. ಇವೆಲ್ಲವೂ ನಿಲ್ಲಬೇಕು. ತ್ವರಿತ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದೇವೆ. ಘಟನೆ ಮಾಸುವ ಮುನ್ನವೇ ಕ್ರಮ ಆಗಬೇಕು. ಇದು ಇತರರಿಗೆ ಎಚ್ಚರಿಕೆ ಆಗಲಿದೆ ಎಂದರು.
ಶಿವಮೊಗ್ಗದಲ್ಲಿ ಘಟನೆ ಆದಾಗ 48 ಗಂಟೆಯಲ್ಲಿ ಬಂಧಿಸಿ, ಎಎನ್ ಐಗೆ ಕೊಟ್ಟಿದ್ದೇವೆ. ಈ ಹಿಂದಿನ ಸರ್ಕಾರದಲ್ಲಿ ಎಫ್ ಐಆರ್ ಕೂಡಾ ಆಗುತ್ತಿರಲಿಲ್ಲ. ಹರ್ಷ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಆರಾಮಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಜೈಲಿನ ಮೇಲೆ ದಾಳಿ ನಡೆಸಿ 15 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಿದ್ದೇವೆ. ಕಾಂಗ್ರೆಸ್ ಮಾಡಿಟ್ಟಿರುವ ಅಸಹ್ಯವನ್ನು ತೊಳೆಯಲು ಸಮಯ ಹಿಡಿಯುತ್ತಿದೆ ಎಂದು ಟೀಕಿಸಿದರು.
ಆರಗ ಅಸಮರ್ಥ, ನಾಲಾಯಕ್ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ನೀಡುವ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ. ನಿಮ್ಮ ಅವಧಿಯಲ್ಲಿ ಏನೇನು ನಡೆದಿದೆ ಎಂಬುದು ನಮಗೂ ಅರಿವಿದೆ. ಮತೀಯ ಸಂಘಟನೆ ಕೇಸ್ ವಾಪಸ್ ಪಡೆದಿದ್ದಾರೆ. ಟಿಪ್ಪು ಜಯಂತಿ ಮಾಡಿ ರಕ್ತಪಾತ ಹರಿಸಿದರು. ಸಿದ್ದರಾಮಯ್ಯ ಅಸಮರ್ಥ ಆಗಿದ್ದಕ್ಕೆ ಅವರ ಕ್ಷೇತ್ರದಲ್ಲಿ ಅವರನ್ನು ಜನ ಸೋಲಿಸಿದರು. ಅವರ ಹಿರಿತನಕ್ಕೆ ಗೌರವ ಕೊಡ್ತೇನೆ. ಆದರೆ ಅಸಮರ್ಥ ಅನ್ನುವ ಪದ ಬೇಡ. ನಿಮ್ಮ ಅವಧಿಯಲ್ಲಿ ಗೃಹ ಇಲಾಖೆಯ ಜುಟ್ಟು ಜನಿವಾರ ಒಬ್ಬ ಅಧಿಕಾರಿಯ ಕೈಯಲ್ಲಿತ್ತು ಎಂದು ವಾಗ್ದಾಳಿ ನಡೆಸಿದರು.










