ಕೊಳಕು ಹಾಸಿಗೆ ಮೇಲೆ ಮಲಗಲು ಹೇಳಿದ ಆರೋಗ್ಯ ಸಚಿವ – ವೈದ್ಯಕೀಯ ವಿವಿ ಉಪಕುಲಪತಿ ರಾಜೀನಾಮೆ…

74
firstsuddi

ಚಂಡೀಗಢ : ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಅವರು ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಪ್ರಸಿದ್ಧ ಆರೋಗ್ಯ ತಜ್ಞರೂ ಆಗಿರುವ ಡಾ. ರಾಜ್ ಬಹದ್ದೂರ್ ಅವರಿಗೆ ರೋಗಿಯೊಬ್ಬರ ಗಲೀಜಾದ ಹಾಸಿಗೆಯ ಮೇಲೆ ಮಲಗಲು ಹೇಳಿದ್ದಾರೆ. ಇದರಿಂದ ಅವಮಾನಿತರಾದ ರಾಜ್ ಬಹದ್ದೂರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್ ಅವರು ಬಾಬಾ ಫರೀದ್ ವೈದ್ಯಕೀಯ ವಿಶ್ವವಿದ್ಯಾಲಯದ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜಿಗೆ ಪರಿಶೀಲನೆಗೆ ಹೋದಾಗ ಚರ್ಮ ರೋಗದ ವಾರ್ಡ್ ನಲ್ಲಿನ ಅವ್ಯವಸ್ಥೆ ಕಂಡು ಕೆಂಡವಾದರು. ವಾರ್ಡ್ ನ ಬೆಡ್ ಗಳ ಅಸ್ವಚ್ಚತೆಯ ಬಗ್ಗೆ ಉಪಕುಲಪತಿಯ ಬಳಿ ಪ್ರಶ್ನಿಸಿದ್ದಾರೆ.

ಇದಕ್ಕೆ ಉಪಕುಲಪತಿಗಳು, ಅನುದಾನದ ಕೊರತೆಯಿಂದಾಗಿ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಹೀಗಾಗಿ ಬೆಡ್ ಗಳು ವ್ಯವಸ್ಥಿತವಾಗಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಸಚಿವರು ರಾಜ್ ಬಹದ್ದೂರ್ ಅವರಿಗೆ ರೋಗಿಯೊಬ್ಬರ ಗಲೀಜಾದ ಹಾಸಿಗೆಯ ಮೇಲೆ ಮಲಗಲು ಹೇಳಿದ್ದಾರೆ. ರಾಜ್ ಬಹದ್ದೂರ್ ಅವರು ಹಾಸಿಗೆ ಮೇಲೆ ಮಲಗಿಕೊಂಡಿದ್ದಾರೆ.

ಘಟನೆ ಬಳಿಕ ರಾಜ್ ಬಹದ್ದೂರ್ ಅವರು, ನನ್ನ ಜೀವನದಲ್ಲಿ ಈ ರೀತಿಯ ಘಟನೆಯನ್ನು ಎದುರಿಸಿಲ್ಲ. ಆರೋಗ್ಯ ಸಚಿವರ ವರ್ತನೆ ನನ್ನನ್ನು ಘಾಸಿಗೊಳಿಸಿದೆ. ಹೀಗಾಗಿ ತಾವು ಕುಲಪತಿ ಹುದ್ದೆಯಿಂದ ಹಿಂದೆ ಸರಿಯುವುದಾಗಿ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಅಲ್ಲದೇ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ವಿರೋಧಪಕ್ಷಗಳು ಹಂಚಿಕೊಂಡಿದ್ದು, ಆರೋಗ್ಯ ಸಚಿವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದೆ.