ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ನ್ಯೂಜಿಲೆಂಡ್ ನ ಗ್ರೆಗ್ ಬಾರ್ಕ್ಲೇ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ 2020ರ ಬಳಿಕ 2022ರಲ್ಲಿ ಮತ್ತೊಮ್ಮೆ ಐಸಿಸಿಯ ಅಧ್ಯಕ್ಷರಾಗಿ ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಬಾರ್ಕ್ಲೇ ಅವರು ಮುಂದಿನ ಎರಡು ವರ್ಷಗಳ ಕಾಲ ಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಬಾರ್ಕ್ಲೇ ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ 17 ಸದಸ್ಯರ ಮಂಡಳಿಯಲ್ಲಿ ಬಿಸಿಸಿಐ ಕೂಡ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಿದೆ. 2015ರ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ನ ಡೈರೆಕ್ಷರ್ ಆಗಿ ಕೆಲಸ ಮಾಡಿದ್ದ ಗ್ರೆಗ್ ಬಾರ್ಕ್ಲೇ, ನಾರ್ಥನ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ ನ ಸದಸ್ಯರು ಆಗಿದ್ದರು.
ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಐಪಿಎಲ್ ಅಧ್ಯಕ್ಷ ಸ್ಥಾನವನ್ನು ನೀಡಲು ಬಿಸಿಸಿಐ ಮುಂದಾಗಿತ್ತು. ಆದರೆ ಗಂಗೂಲಿಗೆ ಐಸಿಸಿ ಅಧ್ಯಕ್ಷ ಹುದ್ದೆ ಅಥವಾ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯುವ ಬಯಕೆ ಇತ್ತು. ಹೀಗಾಗಿ ಬಿಸಿಸಿಐ ನೀಡಿದ್ದ ಆಫರನ್ನು ದಾದಾ ನಿರಾಕರಿಸಿದ್ದರು. ಇದಾದ ನಂತರ ಗಂಗೂಲಿ ಐಸಿಸಿ ಅಧ್ಯಕ್ಷ ಸ್ಥಾನದ ರೇಸ್ ಗೆ ಎಂಟ್ರಿಕೊಟ್ಟಿದ್ದರು. ಆದರೆ ಭಾರತೀಯ ಕ್ರಿಕೆಟ್ ಮಂಡಳಿ ದಾದಾರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ಗಂಗೂಲಿ ಈ ರೇಸ್ ನಿಂದ ಹೊರಬಿದ್ದಿದ್ದರು.










