ಎರಡು ಸರ್ಕಾರಿ ಬಸ್ಸುಗಳು ಮುಖಾಮುಖಿ ಡಿಕ್ಕಿ- 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ…

75
firstsuddi

ಚಿಕ್ಕಮಗಳೂರು: ಎರಡು ಸರ್ಕಾರಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಬಳಿ ನಡೆದಿದೆ.

ಬಸ್ಸುಗಳ ಅಪಘಾತಕ್ಕೆ ಎರಡೂ ಬಸ್ಸಿನ ಚಾಲಕರ ಬೇಜವಾಬ್ದಾರಿ ಹಾಗೂ ಅತಿ ವೇಗವಾಗಿ ಚಲಾಯಿಸಿದ್ದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಸ್‌ಗಳ ಮುಖಾಮುಖಿ ಡಿಕ್ಕಿಯಾದ ಸಂದರ್ಭದಲ್ಲೂ ಕೂಡ ಎರಡೂ ಬಸ್‌ನ ಡ್ರೈವರ್ ಸೀಟ್‌ನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹೀಗಾಗಿ ಎರಡೂ ಬಸ್ಸಿನ ಚಾಲಕರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು 5 ಆಂಬುಲೆನ್ಸ್ ಗಳಲ್ಲಿ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಡಿಗೆರೆ ತಾಲ್ಲೂಕು ಬಹುತೇಕ ಮಲೆನಾಡು ಭಾಗದಿಂದ ಕೂಡಿದೆ. ಇಲ್ಲಿ ಹಾವು ಬಳಕಿನ ಮೈ ಕಟ್ಟಿನ ರಸ್ತೆಯೇ ಹೆಚ್ಚು. ಹಾಗಾಗಿ, ವಾಹನಗಳ ಚಾಲಕರು ಅತ್ಯಂತ ಜಾಗರೂಕರಾಗಿ ವಾಹನ ಚಲಾಯಿಸಬೇಕು. ಇಲ್ಲವಾದರೆ ಅಪಘಾತ ಕಟ್ಟಿಟ್ಟ ಬುತ್ತಿ. ಹಾವು ಬಳುಕಿನ ಮೈಕಟ್ಟಿನ ರಸ್ತೆಯಾಗಿರುವುದರಿಂದ ಮೂಡಿಗೆರೆ ತಾಲೂಕಿನ ಅಲ್ಲಲ್ಲೇ ಸಾಕಷ್ಟು ಅಪಘಾತಗಳು ಕೂಡ ಸಂಭವಿಸುತ್ತಿವೆ. ಆದರೆ, ತರಬೇತಿ ಪಡೆದ ಸರ್ಕಾರಿ ಬಸ್ಸಿನ ಚಾಲಕರು ವೇಗವಾಗಿ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.