ಮೂಡಿಗೆರೆ : ಎಲ್ಲಿಬೇಕೆಂದರಲ್ಲಿ ಕಾಣುವ ಕಸದ ರಾಶಿ- ಪಟ್ಟಣ ಪಂಚಾಯಿತಿ ವಿರುದ್ಧ ಸಾರ್ವಜನಿಕರ ಆಕ್ರೋಶ…

486
firstsuddi

ಮೂಡಿಗೆರೆ : ಪಟ್ಟಣದಾಧ್ಯಂತ ಕೊಳೆತ ಕಸಗಳು ಪಟ್ಟಣದ ವಿವಿಧ ರಸ್ತೆ ಬದಿಗಳಲ್ಲಿ ರಾಜಾರೋಶವಾಗಿ ಸುರಿದುಹೋಗುತ್ತಿರುವುದರಿಂದ ಪಟ್ಟಣದ ಸೌಂದರ್ಯ ಒಂದು ಕಡೆ ಹಾಳಾಗುತ್ತಿದ್ದರೆ ಮತ್ತೊಂದು ಕಡೆ ಪರಿಸರ ಹಾನಿಯಾಗುತ್ತಿದ್ದು, ಇಂತಹ ಪರಿಸ್ಥತಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಆಯಾ ವಾರ್ಡಿನ ಸದಸ್ಯರ ಕಣ್ಣೆದುರಲ್ಲೇ ಪ್ರತಿದಿನವೂ ಗೋಚರಿಸುತ್ತಿದ್ದರು ನಮಗೂ ಅದಕ್ಕೂ ಯಾವೊಂದು ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ.

ಪ್ರತಿದಿನವೂ ಪಟ್ಟಣ ಪಂಚಾಯಿತಿಯ ವಿರುದ್ಧ ಯಾವುದಾದರೊಂದು ವಿಷಯಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಸಾರ್ವಜನಿಕರು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದು, ಅದಕ್ಕೆ ಮತ್ತೊಂದು ಉದಾಹರಣೆಯೆಂಬಂತೆ ಪಟ್ಟಣದ ವಿವಿಧ ಬೀದಿಗಳಲ್ಲಿ ಎಲ್ಲಿಬೇಕೆಂದರಲ್ಲಿ ಕಸದ ರಾಶಿಗಳು ಎದ್ದು ಕಾಣುತ್ತಿದ್ದು, ಇದು ಪಟ್ಟಣ ಪಂಚಾಯಿತಿಯವರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.

ಕೇಂದ್ರ ಸರ್ಕಾರವು ಕಸದ ನಿರ್ಮೂಲನೆಗೆಂದೇ ಸ್ವಚ್ಚಭಾರತ ಯೋಜನೆಯಡಿಯಲ್ಲಿ ಬೇಕಾದಷ್ಟು ಅನುಧಾನಗಳನ್ನು ಸಂಬಂಧಪಟ್ಟ ಇಲಾಖೆಗೆ ನೀಡುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸುವಲ್ಲಿ ಮೂಡಿಗೆರೆ ಪಟ್ಟಣ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಪಟ್ಟಣದ ವಿವಿಧ ವಾರ್ಡ್‍ಗಳಿಗೆ ಕಸ ವಿಂಘಡಿಸಲೆಂದೇ ಕಸ ವಿಲೇವಾರಿ ವಾಹನಗಳು ಬಂದರೂ ಹಸಿಕಸ, ಒಣಕಸ ಎಂಬಂತಹ ತಾರತಮ್ಯದಿಂದ ಕೇವಲ ಹಸಿಕಸಗಳನ್ನು ಸಂಗ್ರಹಿಸುತ್ತಿದ್ದು, ಇಂತಹ ವ್ಯವಸ್ಥೆಯಿಂದ ಬೇಸತ್ತು ಇಲ್ಲಿನ ಜನರು ಒಣಕಸವನ್ನು ಎಲ್ಲಿ ಹಾಕಲಿ ಎಂಬಂತಹ ಗೊಂದಲದೊಂದಿಗೆ ತಮ್ಮ ಬಳಿ ಇರುವ ಒಣಕಸವನ್ನು ಅಲ್ಲಲ್ಲೇ ರಸ್ತೆ ಬದಿಯಲ್ಲಿ ಸುರಿದು ಹೋಗುವುದರಿಂದ ಒಣಕಸದ ಬದಲು ಅದು ಕೊಳೆತ ಕಸವಾಗಿ ಮಾರ್ಪಟ್ಟು ಅದರಿಂದ ಕೀಟ ಕ್ರಿಮಿಗಳು ಉಂಟಾಗಿ ಗಬ್ಬು ನಾರುತ್ತಿದ್ದು, ಇದರಿಂದಾಗಿ ಪಟ್ಟಣದ ಜನತೆಯ ಆರೋಗ್ಯಕ್ಕೆ ನೇರವಾಗಿ ಪರಿಣಾಮ ಬೀರುವುದರಿಂದ ಇಂತಹ ಅವ್ಯವಸ್ಥೆಯ ಬಗ್ಗೆ ಪಟ್ಟಣ ಪಂಚಾಯಿತಿ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಪಟ್ಟಣ ಪಂಚಾಯಿತಿಯ ಚುನಾವಣೆ ನಡೆದು ಅದರಲ್ಲಿ ಕೆಲವೊಂದು ನೂತನ ಸದಸ್ಯರು ಆಯ್ಕೆಗೊಂಡಿದ್ದು, ಅವರಿಗೂ ಸಹ ಪಟ್ಟಣದ ಅವ್ಯವಸ್ಥೆಯ ಬಗ್ಗೆ ಪರಿಪೂರ್ಣ ಮಾಹಿತಿ ಇದ್ದು, ಇಂತಹ ವ್ಯವಸ್ಥೆಯನ್ನು ಸರಿಪಡಿಸುವ ಸಲುವಾಗಿ ಇವರು ಸನ್ನದ್ದರಾದಲ್ಲಿ ಪಟ್ಟಣದ ಕೆ.ಎಂ ರಸ್ತೆಯಲ್ಲಿ ಎಗ್ಗಿಲ್ಲದಂತೆ ನಡೆಯುತ್ತಿರುವ ಮಾಂಸ ಮತ್ತು ಮೀನಿನ ಅಂಗಡಿಯ ಕೊಳೆತು ನಾರುವ ಕಳೇಬರಗಳು ಅಲ್ಲೇ ರಸ್ತೆ ಬದಿಯಲ್ಲಿ ಸುರಿಯುವುದರಿಂದ ಜನರು ಮೂಗಿನ ಮೇಲೆ ಕೈಯಿಟ್ಟು ನಡೆಯುವ ಪರಿಸ್ಥಿತಿ ಇದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಮಾರುಕಟ್ಟೆಗೆ ಬೇರೆ ಬೇರೆ ಹೊಸ ಮಳಿಗೆಗಳನ್ನು ನಿರ್ಮಿಸಿ ಹಲವು ವರ್ಷಗಳು ಕಳೆದಿದ್ದರೂ ಅದಕ್ಕೆ ಕಾಯಕಲ್ಪವೆಂದು ಸಿಗುವುದು ಎಂದು ಇಲ್ಲಿನ ಜನತೆ ಕಾಯುತ್ತಿದ್ದಾರೆ. ಆದರೆ ಇಂತಹ ಗಂಭೀರ ವಿಷಯಗಳನ್ನು ಆದಷ್ಟು ಬೇಗ ಪರಿಗಣಿಸಿ ಪಟ್ಟಣ ಪಂಚಾಯಿತಿಯ ನೂತನ ಸದಸ್ಯರು ಒಕ್ಕೊರಲಿನಿಂದ ಕೆಲಸವನ್ನು ಮಾಡಿದರೆ ಪಟ್ಟಣದ ಹಿರಿಮೆಯನ್ನು ಎತ್ತಿಹಿಡಿಯಬಹುದಾಗಿದೆ.