ಎಸಿಬಿ ದಾಳಿ : ಬ್ರೋಕರ್‌ಗಳ ಆಸ್ತಿ ಕಂಡು ಎಸಿಬಿ ಅಧಿಕಾರಿಗಳೇ ದಂಗು…

70

ಬೆಂಗಳೂರು : ನಗರದಲ್ಲಿಂದು ಬೆಳ್ಳಂಬೆಳಗ್ಗೆ ಬಿಡಿಎ ಮಧ್ಯವರ್ತಿಗಳು, ಏಜೆಂಟ್ ಗಳ ಮನೆ ಮೇಲೆ ಎಸಿಬಿ ದಾಳಿ ಮಾಡಿದೆ. ಬಿಡಿಎ ಅಧಿಕಾರಿಗಳ ಜೊತೆ ಸೇರಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದ ಹಿನ್ನೆಲೆ ಏಕಕಾಲದಲ್ಲಿ ಎಸಿಬಿ ಎಸ್ ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ 9 ಕಡೆ ದಾಳಿ ಮಾಡಲಾಗಿದೆ.

ಆರ್.ಟಿ.ನಗರದ ಮನೋರಾಯನಪಾಳ್ಯ ನಿವಾಸಿಯಾಗಿರುವ ಬಿಡಿಎ ಬ್ರೋಕರ್ ಮೋಹನ್ ಮನೆಯಲ್ಲಿ ಬರೋಬ್ಬರಿ ಎರಡೂವರೆ ಕೋಟಿ ಮೌಲ್ಯದ 4.5 ಕೆಜಿ ಚಿನ್ನ ಪತ್ತೆಯಾಗಿದೆ. ಅಪಾರ ಪ್ರಮಾಣದ ಬೆಳ್ಳಿ ತಟ್ಟೆ, ಲೋಟ, ಬಟ್ಟಲು, ದೀಪ, ಚಿನ್ನದ ಸರ, ಚಿನ್ನದ ಓಲೆ, ಚಿನ್ನಡ ಡಾಬು ಸಿಕ್ಕಿದೆ. ಮೋಹನ್ ಗೆ ಸೇರಿದ ಲ್ಯಾಪ್ ಟಾಪ್, ಒಂದು ಬ್ಯಾಗ್ ನಷ್ಟು ದಾಖಲೆಯನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಿಡಿಎ ಏಜೆಂಟ್ ಆಗಿರುವ ಮಲ್ಲತ್ತಹಳ್ಳಿಯಲ್ಲಿರುವ ಮುನಿರತ್ನ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮನೆ ನೋಡಿ ಎಸಿಬಿ ಅಧಿಕಾರಿಗಳಿಗೆ ಶಾಕ್ ಆಗಿದೆ. ಬಂಗಲೆಯಂತಹ ಐಷರಾಮಿ ಮನೆಯೊಳಗೆ ಸಿಮ್ಮಿಂಗ್ ಪುಲ್, ದುಬಾರಿಗೆ ಗ್ರಾನೈಟ್, ಪೀಠೋಪರಣಗಳು ಹಾಗೂ ಹೋಮ್ ಥಿಯೇಟರ್ ಇರುವುದು ಗೊತ್ತಾಗಿದೆ. ಆದರೆ 8 ಕೋಟಿಯ ಐಷಾರಾಮಿ ಬಂಗಲೆಯಲ್ಲಿ ಇದುವರೆಗೂ ಪತ್ತೆಯಾಗಿರುವ ನಗದು ಕೇವಲ 10 ಸಾವಿರ. ಇನ್ನೂ ಕಾರ್ ನಲ್ಲಿದ್ದ ದಾಖಲೆಯನ್ನ ಸೀಜ್ ಮಾಡಿದ್ದಾರೆ.

ಬಿಡಿಎ ಬ್ರೋಕರ್ ತೇಜಸ್ಚಿ ದ್ವಿತೀಯ ಪಿಯುಸಿ ಮುಗಿಸಿ ಜೆರಾಕ್ಸ್ ಅಂಗಡಿ ಶುರು ಮಾಡಿದ್ದರು. ಆದರೆ, ಈಗ ತೇಜಸ್ವಿ ಕೋಟಿ ಕೋಟಿ ಬೆಲೆಯ ಬಂಗಲೆ ಮಾಲೀಕರಾಗಿದ್ದಾರೆ. ಆರ್ ಆರ್ ನಗರದ ತೇಜಸ್ವಿ ಬಂಗಲೆ ತಮಿಳುನಾಡಿನ ಮಾಜಿ ಮಂತ್ರಿಯವರದ್ದು ಎನ್ನಲಾಗಿದೆ. ತಮಿಳುನಾಡಿನ ಡಿಎಂಕೆಯ ಮಾಜಿ ಮಂತ್ರಿ ದಿವಂಗತ ವೀರಪಾಂಡಿಯನ್ ಆರುಮುಗಂ ಮಗಳಿಂದ 14 ಕೋಟಿಗೆ ಬಂಗಲೆ ಖರೀದಿಸಿದ್ದರು ಎನ್ನಲಾಗಿದೆ. ಸದ್ಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮುದ್ದಿನಪಾಳ್ಯದಲ್ಲಿರುವ ಬ್ರೋಕರ್ ಅಶ್ವತ್ಥ್ ಮನೇಲಿ ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಇನ್ನೋವಾ, ಆಡಿ, ಬೆಂಜ್, ಕೋಟ್ಯಾಂತರ ಮೌಲ್ಯದ ಲಕ್ಸೂರಿ ಕಾರುಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ದೊಮ್ಮಲೂರಿನ ಬ್ರೋಕರ್ ಮನೋಜ್ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ದೇಶ ಹಾಗೂ ವಿದೇಶಗಳ ಪ್ರತಿಷ್ಟಿತ ಬ್ರಾಂಡ್ ನ 19 ಸನ್ ಗ್ಲಾಸಸ್ ಹಾಗೂ 22 ಗಡಿಯಾರಗಳು ಪತ್ತೆಯಾಗಿದ್ದು, ಅಧಿಕಾರಿಗಳು ಇನ್ನೂ ಮನೆಯನ್ನು ಜಾಲಾಡುತ್ತಿದ್ದಾರೆ.