ಎಸ್.ಎಲ್. ಧರ್ಮೇಗೌಡ ಅವರ ಸಾವು ಆತ್ಮಹತ್ಯೆಯಲ್ಲ, ರಾಜಕೀಯ ಕೊಲೆ-ಹೆಚ್‍ಡಿಕೆ ಆರೋಪ…

175
firstsuddi

ಬೆಂಗಳೂರು : ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರ ಸಾವಿನ ಸುದ್ದಿ ರಾಜ್ಯ ರಾಜಕೀಯದಲ್ಲಿ ಆಘಾತ ಉಂಟು ಮಾಡಿದ್ದು, ಈ ನಡುವೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಧರ್ಮೇಗೌಡ ಅವರ ಸಾವು ಆತ್ಮಹತ್ಯೆಯಲ್ಲ ರಾಜಕೀಯ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸ್ನೇಹಿತ ಇಂದು ನನ್ನನ್ನು ಬಿಟ್ಟು ಅಗಲಿದ್ದಾರೆ. ಇದು ಆತ್ಮಹತ್ಯೆಯಲ್ಲ ಇದೊಂದು ರಾಜಕೀಯ ಕೊಲೆ. ನಾನು 1995ರಿಂದ ಧರ್ಮೇಗೌಡರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಾಗಿರಲಿಲ್ಲ, ಆದರೆ ಇಂದು ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನ ಜೀವನದಲ್ಲಿ ಮರೆಯಲಾಗದ ದುರಂತ ದಿನವಾಗಿದೆ. ಧರ್ಮೇಗೌಡ ಅವರು ನನ್ನ ಒಟಹುಟ್ಟಿದ ಸಹೋದರನಂತೆ ಇದ್ದರು. ಧರ್ಮೇಗೌಡ ಅವರು ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್ ಗೆ ಸೇರಲು ಸಿದ್ಧರಾಗಿದ್ದರು. ಆ ಸಂದರ್ಭದಲ್ಲಿ ನಾನು ನಿಮಗೆ ಹೆಚ್‍ಡಿಕೆ ಬೇಕಾ, ಎಂಎಲ್‍ಎ ಸ್ಥಾನ ಬೇಕಾ ಎಂದು ಪ್ರಶ್ನಿಸಿದ್ದೆ. ಆ ಕೂಡಲೇ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದ್ದರು. ಬಳಿಕ ನಾನು ಅವರನ್ನು ವಿಧಾನಪರಿಷತ್ ಉಪಸಭಾಪತಿ ಮಾಡಿದೆ. ಆದರೆ ಅದುವೇ ಅವರ ಜೀವಕ್ಕೆ ಮುಳುವಾಯಿತೋ ಎಂದು ಅನಿಸುತ್ತಿದೆ ಎಂದು ಕಣ್ಣೀರು ಹಾಕಿದರು.