ನವದೆಹಲಿ : ಕೆಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಭಾರತದಾದ್ಯಂತ ಹಲವಾರು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ಹುಟ್ಟುಹಾಕಿದೆ. ದೆಹಲಿ, ಬಿಹಾರ, ರಾಜಸ್ಥಾನ ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಯೋಜನೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ಹಾಗಾದ್ರೆ ಏನಿದು ಭಾರತೀಯ ಸೇನೆಯ ಅಗ್ನಿಪಥ್ ನೇಮಕಾತಿ ಯೋಜನೆ? ಈ ಹೊಸ ನೇಮಕಾತಿ ಯೋಜನೆಗೆ ವಿರೋಧ ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಏನಿದು ಅಗ್ನಿಪಥ್ ಯೋಜನೆ?
ನೂತನ ಅಗ್ನಿಪಥ್ ಯೋಜನೆ ಪ್ರಕಾರ ಸೇನೆಯ 3 ವಿಭಾಗಗಳಲ್ಲಿ ನಾಲ್ಕು ವರ್ಷದ ಮಟ್ಟಿಗೆ ಅಗ್ನಿವೀರ್ ಎಂಬ ಹೆಸರಿನ ಯೋಧರಾಗಿ ಕೆಲಸ ಮಾಡಬಹುದಾಗಿದೆ. ಹದಿನೇಳೂವರೆ ವರ್ಷದಿಂದ 22 ವರ್ಷದೊಳಗಿನವರು ಅಗ್ನಿ ಪಥ ಯೋಜನೆಯಡಿ ಸೇನೆ ಸೇರಬಹುದು. ಕನಿಷ್ಠ 10ನೇ ತರಗತಿ ಪಾಸಾಗಿದ್ದರೂ ಸೇನೆಗೆ ಸೇರಲು ಅವಕಾಶ ಇದೆ.
ಅಗ್ನಿಪಥ್ ಯೋಜನೆಯಡಿ ಸೇನೆಯಲ್ಲಿ 4 ವರ್ಷ ಪೂರೈಸಿದ ಬಳಿಕ ಸೇನೆ ಕೆಲಸ ಬಿಟ್ಟು ಬರಬೇಕು. ಈ ಯೋಜನೆಯಡಿ ಸೇವೆ ಸಲ್ಲಿಸಿದ ಶೇ.25ರಷ್ಟು ಮಂದಿಗೆ ಮಾತ್ರ ಸೇನೆಯಲ್ಲಿ ಖಾಯಂ ಆಗಿ ನೌಕರಿ ನೀಡಲಾಗುತ್ತದೆ. ಉಳಿದ ಶೇ.75ರಷ್ಟು ಮಂದಿಗೆ ಸೇನೆಯಲ್ಲಿ ಖಾಯಂ ನೌಕರಿ ಸಿಗಲ್ಲ.
ಅಗ್ನಿವೀರರಾದ ಪ್ರತಿಯೊಬ್ಬರಿಗೆ ನಾಲ್ಕು ವರ್ಷದ ಅವಧಿಗೆ ಮಾತ್ರ ವರ್ಷಕ್ಕೆ 4.62 ಲಕ್ಷ ರೂ. ದಿಂದ 6.92 ಲಕ್ಷ ರೂ.ದವರೆಗೆ ಸ್ಯಾಲರಿ ಪ್ಯಾಕೇಜ್ ಇರುತ್ತದೆ. ತಿಂಗಳಿಗೆ 30 ಸಾವಿರದಿಂದ 40 ಸಾವಿರವರೆಗೆ ಸಂಬಳ ಸಿಗಲಿದೆ. ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಅಗ್ನಿವೀರರಿಗೆ ಸುಮಾರು 11.70 ಲಕ್ಷ ರೂ. ಸೇವಾ ನಿಧಿಯಾಗಿ ಕೊಡಲಾಗುತ್ತದೆ. ಇದಕ್ಕೆ ಟ್ಯಾಕ್ಸ್ ಇರಲ್ಲ. ವೈದ್ಯಕೀಯ ವಿಮೆಯೂ ಇರಲಿದೆ. ಆದರೆ ಪಿಂಚಣಿ ಇರಲ್ಲ. ಅಗ್ನಿವೀರರು ತಮ್ಮ ಸೇವೆಯ ಅವಧಿಯಲ್ಲಿ ಹುತಾತ್ಮರಾದರೆ ಅವರಿಗೆ ವಿಮೆ ಹೊರತುಪಡಿಸಿ 1 ಕೋಟಿ ರೂ. ಪರಿಹಾರ ನೀಡಲಾಗುವುದು.
ಅಗ್ನಿಪಥ್ಗೆ ವಿರೋಧ ಏಕೆ?:
ಹಾಲಿ ಇರುವ ವ್ಯವಸ್ಥೆಯಡಿ ಸೇನೆಯಲ್ಲಿ ಸೈನಿಕರಾಗಿ ನೇಮಕವಾದರೆ 12 ರಿಂದ 15 ವರ್ಷ ಸೇವೆಗೆ ಅವಕಾಶ ಇದೆ. ಆದರೆ, ಅಗ್ನಿಪಥದಲ್ಲಿ ಕೇವಲ 4 ವರ್ಷ ಮಾತ್ರ ಸೇವೆಗೆ ಅವಕಾಶ ಇದ್ದು, ಸೇನೆಗೆ ಸೇರುವ ಆಕಾಂಕ್ಷೆ ಇರುವ ನಿರುದ್ಯೋಗಿ ಯುವಕರಿಗೆ ನಿರಾಸೆ ಆಗಿದೆ. ಹೀಗಾಗಿ ವಿರೋಧ ವ್ಯಕ್ತವಾಗುತ್ತಿದೆ.










