ಶಿವಮೊಗ್ಗ : ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಈ ವಿಚಾರ ಕೇವಲ ಊಹಾಪೋಹ ಅಷ್ಟೇ. ನಾಯಕತ್ವ ಬದಲಾವಣೆ ವಿಚಾರ ಕೆಲವು ಪತ್ರಿಕೆ, ಟಿವಿಗಳಲ್ಲಿ ಸುದ್ದಿಯಾಗಿರುವುದನ್ನು ನಾನು ಗಮನಿಸಿದ್ದೇನೆ. ಅವರಿಗೆ ಸುದ್ದಿ ಬೇಕು ಅದಕ್ಕೆ ಹಾಕಿದ್ದಾರೆ ಅಷ್ಟೇ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಏನೇ ಸರ್ಕಸ್ ಮಾಡಿದ್ರು ಸಹ ಬಿಜೆಪಿ ಶಾಸಕರ ಒಗ್ಗಟ್ಟು ಮುರಿಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಬಗ್ಗೆ ಕೇಂದ್ರದ ನಾಯಕರು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಕೇಂದ್ರದ ನಾಯಕರು ತೀರ್ಮಾನ ಮಾಡಿದ್ದಾರೆ. ಶಾಸಕಾಂಗ ಸಭೆ ಕರೆಯಬೇಕು ಎಂದು ಯಾರು ಕೇಳಿದ್ದಾರೆ. ಅವಶ್ಯಕತೆ ಇದ್ದಾಗ ಶಾಸಕಾಂಗ ಸಭೆ ಕರೆಯುತ್ತಾರೆ. ಕ್ಯಾಬಿನೆಟ್ ಸಭೆ ನಡೆಸಲು ಸಹ ಹಿಂದೆ ಮುಂದೆ ನೋಡುತ್ತಿದ್ದೇವೆ. ನಮ್ಮ ಎಲ್ಲಾ ಶಾಸಕರು ಅವರವರ ಕ್ಷೇತ್ರದಲ್ಲಿ ಕೋವಿಡ್ ದೂರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಈ ವಿಷಯದಲ್ಲಿ ಸುಮ್ಮನೆ ರಾಜಕಾರಣ ಬೆರೆಸುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದು ಸಚಿವ ಈಶ್ವರಪ್ಪನವರು ಹೇಳಿದ್ದಾರೆ.










