ನವದೆಹಲಿ : ಏರ್ ಇಂಡಿಯಾವನ್ನ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿದ್ದು, ಕೇಂದ್ರ ವಿಮಾನಯಾನ ಸಚಿವಾಲಯ ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಲಿದೆ.
ಏರ್ ಇಂಡಿಯಾವನ್ನು ಮೂಲತಃ ಟಾಟಾ ಏರ್ಲೈನ್ಸ್ ಎಂದು ಕರೆಯಲಾಗುತ್ತಿತ್ತು, ಇದನ್ನು 1932 ರಲ್ಲಿ ಕೈಗಾರಿಕೋದ್ಯಮಿ ಜೆಆರ್ಡಿ ಟಾಟಾ ಸ್ಥಾಪಿಸಿದರು. ಸರ್ಕಾರವು ಸೆಪ್ಟೆಂಬರ್ 29, 1953 ರಲ್ಲಿ ಈ ವಿಮಾನಯಾನವನ್ನು ರಾಷ್ಟ್ರೀಕರಣಗೊಳಿಸಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಏರ್ ಇಂಡಿಯಾ ವಿಮಾನಯಾನವು ಭಾರೀ ನಷ್ಟ ಅನುಭವಿಸುತ್ತಿತ್ತು. ಹೀಗಾಗಿ ಸರ್ಕಾರವು ವಿಮಾನಗಳ ಷೇರು ಬಿಡ್ ಮಾಡಲು ಸಿದ್ಧವಿರುವುದಾಗಿ ಘೋಷಣೆ ಮಾಡಿತ್ತು.
ಟಾಟಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಲಿಮಿಟೆಡ್ ಸರ್ಕಾರಕ್ಕೆ ಬಿಡ್ ಸಲ್ಲಿಸಿದ್ದವು. ಇದೀಗ ಟಾಟಾ ಗ್ರೂಪ್ ವಿಜೇತ ಬಿಡ್ಡರ್ ಆಗಿ ಹೊರಹೊಮ್ಮಿದ್ದು, ಏರ್ ಇಂಡಿಯಾವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.










