ಬೆಂಗಳೂರು: ತೆರಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಗರದ ಯಡಿಯೂರಿನ ಸಾಕಮ್ಮ ಗಾರ್ಡನ್ ನಲ್ಲಿರುವ ಗೌರವ್ ಚೋರ್ಡಿಯಾ ಎಂಬ ಜ್ಯುವೆಲ್ಲರಿ ಶಾಪ್ ಮಾಲೀಕ ಆಭೂಷಣ್ ಎಂಬವರ ಮನೆ ಮೇಲೆ ದಾಳಿ ನಡೆಸಿದ ವೇಳೆ ಮನೆಯಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಪತ್ತೆಯಾಗಿದ್ದಾರೆ.
ಕಳೆದೆರಡು ದಿನಗಳಿಂದ ಜ್ಯುವೆಲ್ಲರಿ ಶಾಪ್ ಲೆಕ್ಕ ಪತ್ರ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು, ನಿವಾಸದ ಮೇಲೂ ದಾಳಿ ನಡೆಸಿ ಮನೆಯಲ್ಲಿ ಶೋಧ ನಡೆಸುವಾಗ ಕಾನೂನುಬಾಹಿರವಾಗಿ ಇಬ್ಬರು ಅಪ್ರಾಪ್ತ ಬಾಲಕಿಯರನ್ನಿರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಭೂಷಣ್ ಎಂಬವರ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.
10 ಹಾಗೂ 8 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಮನೆಯಲ್ಲಿಟ್ಟುಕೊಂಡು ಮಾಲಕೀ ಪಿಂಕಿ ಜೈನ್ ಆನಾರೋಗ್ಯದಲ್ಲಿದ್ದು ಅವರ ಆರೈಕೆಗೆ ಕರೆತಂದಿರುವುದಾಗಿ ತಿಳಿದು ಬಂದಿದೆ. ಸದ್ಯ ಐಟಿ ಅಧಿಕಾರಿಗಳು ಅಪ್ರಾಪ್ತ ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಿ ಹಿರಿಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಕಾನೂನು ಬಾಹಿರವಾಗಿ ಮಕ್ಕಳ ಬಳಕೆ ವಿಚಾರವಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ಅಭೂಷಣ್ ಕುಟುಂಬದ ಮೇಲೆ ದಾಖಲಾಗಿದೆ. ಅಶೋಕ್ ಕುಮಾರ್, ಶ್ರೇಯಸ್ ಚೌಡರೆ, ಗೌರವ್ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ ಅಪ್ರಾಪ್ತ ಮಕ್ಕಳು ಸಿದ್ದಾಪುರದ ಬಾಲ ರಕ್ಷಣಾ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಜಯನಗರ ಪೊಲೀಸರು ಆರೋಪಿಗಳ ವಿರುದ್ಧ ಸುಮೋಟೊ(ಸ್ವಯಂ ಪ್ರೇರಿತ) ಕೇಸ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.










