ಒಂದು ವಸ್ತು ನಮ್ಮ ಕಣ್ಣಿಗೆ ಕಾಣುವುದಿಲ್ಲ ಎಂದ ಮಾತ್ರಕ್ಕೆ ಅದು ಇಲ್ಲವೇ ಇಲ್ಲ ಎನ್ನುವುದು ತಪ್ಪು. ದೇವರು ಸಹ ಕಾಣುವುದಿಲ್ಲ ಆದರೂ ದೇವರಿದ್ದಾನೆ -ಡಾ.ಪಾವಗಡ ಪ್ರಕಾಶ್‍ರಾವ್

256

ಚಿಕ್ಕಮಗಳೂರು- ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಸನಾತನ ಹಿಂದು ಧರ್ಮ ಸಂಸ್ಕøತಿ ಮತ್ತು ಪರಂಪರೆಯ ಉದ್ಧಾರಕ್ಕಾಗಿ ಜನ್ಮ ತಳೆದವರು ಎಂದು ಬ್ರಾಹ್ಮಣ ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಡಿ.ಎಚ್.ನಟರಾಜ್ ಹೇಳಿದರು.
ಶೃಂಗೇರಿ ಶಂಕರಮಠ ಮತ್ತು ಬ್ರಾಹ್ಮಣ ಮಹಾಸಭಾ, ಜಗದ್ಗುರು ಶ್ರೀ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಕಾಲದ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶಂಕರಾಚಾರ್ಯರ ತತ್ವ ಮತ್ತು ಸಿದ್ಧಾಂತಗಳು ಹಾಗೂ ಸಂದೇಶಗಳು ಸಾರ್ವಕಾಲಿಕ ಸತ್ಯಗಳು. ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದರಿಂದಾಗಿ ನಂತರ ಅನೇಕ ಸಿದ್ಧಾಂತಗಳು ಹುಟ್ಟಲು ಕಾರಣವಾಯಿತು ಎಂದರು.
ಒಂದು ಕಾಲದಲ್ಲಿ ಅತ್ಯಂತ ವೈಭವವಾಗಿ ಬೆಳೆದಿದ್ದ ಸನಾತನ ಪರಂಪರೆ ಇತ್ತೀಚಿನ ದಿನಗಳಲ್ಲಿ ಮಸುಕಾಗುತ್ತಿರುವುದಕ್ಕೆ ಒಂದೆಡೆ ಆಡಳಿತ ನಡೆಸುವವರು ಕಾರಣವಾದರೆ ಮೂಲ ಕಾರಣ ಹಿಂದುಗಳೆ ಎಂದ ಅವರು, ಈಗಲಾದರೂ ನಮ್ಮವರು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಧಾರ್ಮಿಕ ಪ್ರವಚನ ನೀಡಿದ ಅದ್ವೈತ ವಾಚಸ್ಪತಿ ಡಾ.ಪಾವಗಡ ಪ್ರಕಾಶ್‍ರಾವ್, ಒಂದು ವಸ್ತು ನಮ್ಮ ಕಣ್ಣಿಗೆ ಕಾಣುವುದಿಲ್ಲ ಎಂದ ಮಾತ್ರಕ್ಕೆ ಅದು ಇಲ್ಲವೇ ಇಲ್ಲ ಎನ್ನುವುದು ತಪ್ಪು. ಗಾಳಿ ಕಣ್ಣಿಗೆ ಕಾಣುವುದಿಲ್ಲ. ಆದರೆ ಅದಿಲ್ಲದಿದ್ದರೆ ಯಾರೂ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಆತ್ಮ ಕಣ್ಣಿಗೆ ಕಾಣುವುದಿಲ್ಲ. ಆದರೂ ಅದು ಇದೆ. ದೇವರು ಸಹ ಕಾಣುವುದಿಲ್ಲ ಆದರೂ ದೇವರಿದ್ದಾನೆ ಎಂದು ಹೇಳಿದರು.
ಪ್ರವಚನದುದ್ದಕ್ಕೂ ಧರ್ಮದ ಸೂಕ್ಷ್ಮತೆಯ ಪರಿಚಯ ಮಾಡಿಕೊಟ್ಟ ಅವರು, ಧರ್ಮ ಎಂದರೆ ಧರಿಸಿರುವುದು ಎಂದರ್ಥ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಪಾವಗಡ ಪ್ರಕಾಶ್‍ರಾವ್ ಅವರನ್ನು ಸಭಿಕರಿಗೆ ಪರಿಚಯಿಸಿದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಎಚ್.ಆರ್.ಮೋಹನ್ ಉಪಸ್ಥಿತರಿದ್ದರು.
ಸುಮಾ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಾಸಭಾದ ಜಂಟಿ ಕಾರ್ಯದರ್ಶಿ ಗೋಪಾಲಕೃಷ್ಣ ಸ್ವಾಗತಿಸಿದರು. ಶಂಕರ ಜಯಂತಿ ಉಪ ಸಮಿತಿ ಅಧ್ಯಕ್ಷ ಎ.ಎನ್.ಮೂರ್ತಿ ವಂದಿಸಿದರು.