ಕಳಸ : ಮುಖ್ಯ ರಸ್ತೆಯ ಅಂಚಿನಲ್ಲಿರುವ ಪುಟ್‍ಪಾತ್ ಚಪಡಿ ಕಲ್ಲುಗಳು ಮುರಿದು ಹೋಗಿ ಸಾರ್ವಜನಿಕರು ಹಾಗೂ ಮಕ್ಕಳ ಪ್ರಾಣಕ್ಕೆ ಮುಳುವಾಗುತ್ತಿದೆ.
ಕಳಸ ಮುಖ್ಯ ರಸ್ತೆಯ ಕಲಶೇಶ್ವರ ದೇವಸ್ಥಾನದಿಂದ ಅಂಬಾತೀರ್ಥದ ತಿರುವು ವರೆಗೆ ಕಾಂಕ್ರೇಟ್ ಹಾಗೂ ಡಾಮಾರಿಕರಣವನ್ನು ಮಾಡಲಾಗಿದೆ. ರಸ್ತೆಯ ಎರಡೂ ಅಂಚಿನಲ್ಲಿ ಪುಟ್ ಪಾತ್‍ಗಳ ನಿರ್ಮಾಣ ಮಾಡಲಾಗಿದೆ.ಆದರೆ ಈ ಪುಟ್ ಪಾತ್ ಅಳವಡಿಸಿದ ಕಾಂಕ್ರೇಟ್ ಚಪಡಿಗಳು ಅಲ್ಲಲ್ಲಿ ಮುರಿದು ಹೋಗಿ ರಾಡುಗಳು ಮೇಲೆದ್ದು ಪಾದಚಾರಿಗಳಿಗೆ ಉಪಯೋಗವಾಗಬೇಕಾದ ಪುಟ್‍ಪಾತ್ ಅವರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ.
ಈ ರಸ್ತೆಯ ಅಂಚಿನಲ್ಲಿ ಪ್ರತಿಯೊಂದು ಸರ್ಕಾರಿ ಕಛೇರಿಗಳು,ಶಾಲಾ ಕಾಲೇಜುಗಳು ಅಂಗನವಾಡಿಗಳು ಇವೆ.ನಿತ್ಯ ನೂರಾರು ಜನ ಪಾದಚಾರಿಗಳು ಇದರ ಮೇಲೆ ಸಂಚಾರ ಮಾಡುತ್ತಾರೆ.ಆದರೆ ಈ ಪುಟ್‍ಪಾತ್ ನಲ್ಲಿ ನಡೆದುಕೊಂಡು ಹೋಗುವ ಅದೆಷ್ಟೋ ನಾಗರೀಕರು ಚರಂಡಿ ಬಿದ್ದು ಗಾಯ ಮಾಡಿಕೊಂಡು ಸಂಬಂದಪಟ್ಟ ಇಲಾಖೆಗೆ ಹಿಡಿಶಾಪ ಹಾಕಿಕೊಂಡು ಹೋಗುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೆ ಅಂಗನವಾಡಿಗೆ ಹೋಗುವ ಮಗುವೊಂದು ಪುಟ್ ಪಾತ್ ಅವ್ಯವಸ್ಥೆಯಿಂದ ಮುರಿದು ಹೋದ ಪುಟ್‍ಪಾತ್ ಒಳಗೆ ಕಾಲು ಸಿಕ್ಕಿ ಹಾಕಿಕೊಂಡ ಪರಿಣಾಮ ಆಸ್ಪತ್ರೆ ಸೇರಬೇಕಾಯಿತು.ಮಹಿಳೆಯೊಬ್ಬರು ನಡೆದುಕೊಂಡು ಹೋಗುವಾಗ ಕಾಂಕ್ರೇಟ್ ಚಪಡಿಯಿಂದ ಕಿತ್ತುಹೋದ ರಾಡು ಕಾಲಿಗೆ ಸಿಕ್ಕಿ ಹಾಕಿಕೊಂಡು ಬಿದ್ದು ಪೆಟ್ಟು ಮಾಡಿಕೊಂಡ ಘಟನೆಯು ನಡೆದಿದೆ.ಕಳಸ ಸರ್ಕಾರಿ ಆಸ್ಪತ್ರೆ ಸಮೀಪವೇ ವೃದ್ಧರೊಬ್ಬರು ಚರಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ.ಈಗೆ ಇಲ್ಲಿಯ ಪುಟ್ ಪಾತ್ ಗುಂಡಿಗೆ ಬಿದ್ದವರ ಪಟ್ಟಿಯೇ ದೊಡ್ಡದಾಗುತ್ತದೆ.
ಇದರಿಂದ ಬೇಸೆತ್ತ ಪಾದಚಾರಿಗಳು ಪುಟ್‍ಪಾತ್ ಸಹವಾಸನೇ ಬೇಡ ಎಂದು ರಸ್ತೆಯ ಮೇಲೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
2018 ರ ಜುಲೈ ತಿಂಗಳಿನಲ್ಲಿ ಕಳಸದಲ್ಲಿ ಸಮಸ್ಯೆಯೊಂದಕ್ಕೆ ಬೇಟಿನೀಡಿದ ಲೋಕೋಪಯೋಗಿ ಇಲಾಖೆಯ ಸೂಪರ್‍ಡೆಂಟಿಯಲ್ ಇಂಜಿನೀಯರ್ ಕೂಡ ಪುಟ್‍ಪಾತ್ ಬಗ್ಗೆ ಅಸಮಾದಾನ ವ್ಯಕ್ತ ಪಡಿಸಿ ಸ್ಥಳಿಯ ಇಂಜಿನೀಯರುಗಳಿಗೆ ಕಾಂಕ್ರೇಟ್ ಚಪಡಿಗಳನ್ನು ಸರಿಪಡಿಸಲು ತಿಳಿಸಿದ್ದರು.ಅಲ್ಲದೆ ಚಪಡಿಯು ಶಿಥಿಲಗೊಳ್ಳಲು ಯಾರು ಕಾರಣಕರ್ತರೋ ಅವರನ್ನು ಗುರುತಿಸಿ ಅವರ ಮೇಲೆ ಪ್ರಕರಣವನ್ನು ದಾಖಲಿಸಿ ಎಂದು ಸೂಚಿಸಿದ್ದರು.ಅಲ್ಲದೆ 2018ರ ನವಂಬರ್ ತಿಂಗಳಿನಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲೂ ಮಕ್ಕಳು ಪುಟ್‍ಪಾತ್ ಸಮಸ್ಯೆಯ ಬಗ್ಗೆ ಗಮನ ಸೆಳೆದು ಸರಿಪಡಿಸುವಂತೆ ಕೇಳಿಕೊಂಡಿದ್ದರು.ಆದರೆ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಸಂಬಂಧಪಟ್ಟವರ ನಿರ್ಲಕ್ಷ್ಯ ಮತ್ತು ಬೇಜಾವಬ್ದಾರಿಯಿಂದ ನಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ಕಳಸ ಮುಖ್ಯ ರಸ್ತೆಯ ಕಾಂಕ್ರೇಟಿಕರಣ ಯಾವಾಗ ಆಯಿತೋ ಅಲ್ಲಿಂದಲೇ ಅಸಮರ್ಪಕ ಪುಟ್ ಪಾತ್ ಬಗ್ಗೆ ಸಾರ್ವಜನಿಕರು ಚಕಾರವೆತ್ತುತ್ತಲೇ ಬಂದಿದ್ದಾರೆ.ಆದರೆ ಅವ್ಯವಸ್ಥೆ ಮಾತ್ರ ಮುಂದುವರೆಯುತ್ತಲೇ ಇದೆ ಅನ್ನುತ್ತಾರೆ ಸಾರ್ವಜನಿಕರು.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಕನ್ನಡ ರಾಜು ಅವರು
ಪುಟ್‍ಪಾತ್ ಮೇಲೆ ಹಾಕಿರುವ ಕಾಂಕ್ರೇಟ್ ಚಪಡಿಗಳು ತುಂಡಾಗಿ ಅದರಲ್ಲಿದ್ದ ರಾಡುಗಳು ಮೇಲೆದ್ದು,ಅದಕ್ಕೆ ಅದೆಷ್ಟೋ ಜನರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.ಶಾಲಾ ಮಕ್ಕಳಿಗೆ,ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ.ಈಗಾಗಲೇ ಹಲವಾರು ಬಾರಿ ಸಂಬಂದಪಟ್ಟವರ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗಲಿಲ್ಲ.ಕೂಡಲೇ ಇದನ್ನು ಸರಿಪಡಿಸಬೇಕು ಇಲ್ಲವಾದರೆ ಇದರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ.










