ಒಳನುಸುಳಲು ಯತ್ನಿಸುತ್ತಿದ್ದ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ…

59
firstsuddi

ಜಮ್ಮು ಮತ್ತು ಕಾಶ್ಮೀರ: ಉತ್ತರಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಲ್ ಸೆಕ್ಟರ್‌ನಲ್ಲಿ ಭಾರತದ ಗಡಿಯೊಳಗೆ ಒಳನುಸುಳಲು ಯತ್ನಿಸುತ್ತಿದ್ದ ನಾಲ್ವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಸೇನೆ ಹೇಳಿಕೊಂಡಿದೆ.

ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದು, ‘ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕುಪ್ವಾರದ ಮಚ್ಚಲ್ ಸೆಕ್ಟರ್‌ನ ಕಾಲಾ ಜಂಗಲ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಿಂದ ನಮ್ಮ ಕಡೆಗೆ ನುಸುಳಲು ಪ್ರಯತ್ನಿಸುತ್ತಿದ್ದ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ’ ಎಂದಿದ್ದಾರೆ.

ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ  ಕಾರ್ಯಾಚರಣೆಯಲ್ಲಿ ಕುಪ್ವಾರದ ಮಚ್ಚಲ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜನೆಗೊಂಡಿದ್ದ ಪಡೆಗಳು ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿವೆ. ಈ ವೇಳೆ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.

ಕಳೆದ ವಾರವೂ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಸಮೀಪವಿರುವ ಜಮ್‌ಗುಂಡ್ ಕೆರಾನ್‌ನಲ್ಲಿ ಇಂತದ್ದೇ ಪ್ರಯತ್ನವನ್ನು ಭದ್ರತಾ ಪಡೆಗಳು ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತಡೆದಿವೆ.

ಭದ್ರತಾ ಪಡೆಗಳು ವಿಫಲಗೊಳಿಸಿದ ಈ ತಿಂಗಳಲ್ಲಿ ಎರಡನೇ ಪ್ರಮುಖ ಒಳನುಸುಳುವಿಕೆ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಇನ್ನು ಈ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ತಿಳಿಸಿದೆ.