ಕನಿಷ್ಠ 2 ವರ್ಷಗಳಿಂದ ಬಳಸದ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಗೂಗಲ್ ನಿರ್ಧಾರ…

41
firstsuddi

ವಾಷಿಂಗ್ಟನ್: ಕನಿಷ್ಠ 2 ವರ್ಷಗಳಿಂದ ಬಳಸದ ಅಥವಾ ಸೈನ್ ಇನ್ ಮಾಡದ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಗೂಗಲ್ ಕಂಪನಿ ತಿಳಿಸಿದೆ.

ಗೂಗಲ್ ತನ್ನ ಬಳಕೆದಾರರ ನಿಷ್ಕ್ರಿಯ ಖಾತೆಗಳ ನೀತಿಯಲ್ಲಿ ಹೊಸ ಬದಲಾವಣೆ ತಂದಿದೆ. ಬಳಕೆದಾರರು ತನ್ನ ಹಳೆಯ ಗೂಗಲ್ ಖಾತೆಗಳನ್ನು ಸೈನ್ ಇನ್ ಮಾಡಲು ಹಾಗೂ ಪರಿಶೀಲಿಸಲು ಹೇಳಿದೆ. ಈ ಹಿಂದೆ 2 ವರ್ಷಗಳಿಂದ ಕಾರ್ಯನಿರ್ವಹಿಸದ ಖಾತೆಗಳಲ್ಲಿ ಸಂಗ್ರಹವಾಗಿರುವ ಡೇಟಾಗಳನ್ನು ಅಳಿಸಿ ಹಾಕುವುದಾಗಿ ಗೂಗಲ್ ಹೇಳಿತ್ತು. ಆದರೀಗ ಇಡೀ ಖಾತೆಯನ್ನೇ ಅಳಿಸಿ ಹಾಕುವುದಾಗಿ ಗೂಗಲ್ ಎಚ್ಚರಿಸಿದೆ.

ಈ ವರ್ಷದ ನಂತರ ಗೂಗಲ್ ಖಾತೆಯನ್ನು ಕನಿಷ್ಠ 2 ವರ್ಷಗಳವರೆಗೆ ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದಿದ್ದರೆ ನಾವು ಖಾತೆಯನ್ನು ಹಾಗೂ ಅದರಲ್ಲಿರುವ ಡೇಟಾಗಳನ್ನು ಅಳಿಸಬಹುದು. ಅವುಗಳಲ್ಲಿ ಗೂಗಲ್ ವರ್ಕ್ ಸ್ಪೇಸ್ (ಜಿಮೇಲ್, ಡಾಕ್ಸ್, ಡ್ರೈವ್, ಕ್ಯಾಲೆಂಡರ್), ಯೂಟ್ಯೂಬ್, ಹಾಗೂ ಗೂಗಲ್ ಫೋಟೋಸ್ ಸೇರಿರುತ್ತವೆ ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

ಡಿಸೆಂಬರ್ 2023ರ ನಂತರ ಹೊಸ ನಿಯಮವನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ ಇದೆ. ಹಾಗಾಗಿ ಈ ಹೊಸ ನೀತಿಯ ಬಗ್ಗೆ ಬಳಕೆದಾರರು ಈ ವರ್ಷದ ಡಿಸೆಂಬರ್ ವರೆಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜಿಮೇಲ್‌ನಲ್ಲಿ ಸಕ್ರಿಯವಾಗಿಲ್ಲದ ಬಳಕೆದಾರರು ತಮ್ಮ ಹಳೆಯ ಖಾತೆಯನ್ನು ಹಿಂಪಡೆಯಲು ಇನ್ನೂ ಸಮಯವಿದೆ. ಆದರೆ ಒಂದು ಬಾರಿ ಡಿಲೀಟ್ ಆದ ಖಾತೆಯನ್ನು ಮರುಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಬಳಕೆದಾರರು ಈ ನೀತಿಯ ಬದಲಾವಣೆ ಬಗ್ಗೆ ತಿಳಿದುಕೊಂಡಿರುವುದು ಹಾಗೂ ತಮ್ಮ ನಿಷ್ಕ್ರಿಯ ಗೂಗಲ್ ಖಾತೆಗಳನ್ನು ಅಳಿಸದಂತೆ ತಡೆಯಲು ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ಬಳಕೆದಾರರು ತಮ್ಮ ಹಳೆಯ ಖಾತೆಗಳನ್ನು ಪರಿಶೀಲಿಸುವುದು ಹಾಗೂ ವಿವಿಧ ಚಟುವಟಿಕೆಯನ್ನು ನಿರ್ವಹಿಸುವುದರಿಂದ ಖಾತೆಗಳನ್ನು ಅಳಿಸದಂತೆ ತಪ್ಪಿಸಬಹುದು.

ಹೊಸ ನೀತಿಯು ವೈಯಕ್ತಿಕ ಗೂಗಲ್ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ. ಶಾಲೆಗಳು ಅಥವಾ ವ್ಯವಹಾರಗಳಂತಹ ಸಂಸ್ಥೆಗಳ ಖಾತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಗೂಗಲ್‍ನಲ್ಲಿ ಉತ್ಪನ್ನ ನಿರ್ವಹಣೆ ವಿಭಾಗದ ವೈಸ್ ಪ್ರೆಸಿಡೆಂಟ್ ರುತ್ ಕ್ರಿಚೆಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.