ಚಿಕ್ಕಮಗಳೂರು: ಕನ್ನಡಿಗರು ಕೀಳರಿಮೆ ಬಿಟ್ಟು ಭಾಷಾಭಿಮಾನ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡಿಗರಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಪಡಬೇಕು ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಮಂಜುನಾಥ್ ಸಲಹೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಹಿಳಾ ಘಟಕ ನಗರದ ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಅತ್ಯಂತ ಪುರಾತನವಾದ ಸಂಪತ್ಭರಿತವಾದ ಸಮೃದ್ಧವಾದ ಭಾಷೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಕನ್ನಡ ಭಾಷೆಗೆ. ಕನ್ನಡದಲ್ಲಿ ವಿಜ್ಞಾನವಿದೆ. ವ್ಯಾಕರಣವಿದೆ. ಎಲ್ಲವೂ ಇದೆ. ಹಾಗಾಗಿ ಕನ್ನಡಿಗರು ಮಾತೃಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಮಗು ತೊದಲುನುಡಿಯುವುದು ಮಾತೃಭಾಷೆಯಲ್ಲಿ. ನಾವು ಬದುಕಿಗಾಗಿ ಯಾವುದೇ ಭಾಷೆಯನ್ನು ಬಳಸಿದರೂ ನಮ್ಮ ನೋವನ್ನು. ನಲಿವನ್ನು. ಭಾವನೆಗಳನ್ನು ಹಂಚಿಕೊಳ್ಳಲು ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ. ಇದನ್ನು ಕನ್ನಡಿಗರು ಅರಿಯಬೇಕು. ದೈನಂದಿನ ವ್ಯವಹಾರಗಳಲ್ಲಿ ಮಾತೃ ಭಾಷೆಯನ್ನು ಬಳಸುವ ಮೂಲಕ ಅದನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿಸ್ಲೇಹಳ್ಳಿ ಸೋಮಶೇಖರ್ ಮಾತನಾಡಿ ಕನ್ನಡಿಗರು ನಾಡು ನುಡಿ ನೆಲ ಜಲ ಮತ್ತು ಪರಂಪರೆಯ ರಕ್ಷಣೆಗೆ ಕಟ್ಟು ಬದ್ಧರಾಗಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ವಿಶ್ವನಾಥ್ ಕನ್ನಡ ಭಾಷೆ. ಅದರ ಸಾಹಿತ್ಯ. ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಕಾರಾಗೃಹದ ನಿವಾಸಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರೂಪ ನಾಯಕ್. ಪ್ರಧಾನ ಕಾರ್ಯದರ್ಶಿ ಶೈಲಾ ಬಸವರಾಜ್. ನಗರ ಘಟಕದ ಅಧ್ಯಕ್ಷರಾದ ಸಚ್ಚಿನ್ ಸಿಂಗ್. ವೀಣಾ ಮಲ್ಲಿಕಾರ್ಜುನ್. ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಕನ್ನಡಿಗರು ಕೀಳರಿಮೆ ಬಿಟ್ಟು ಭಾಷಾಭಿಮಾನ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡಿಗರಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಪಡಬೇಕು: ಮಂಜುನಾಥ್.










