ಗದಗ: ಯುವಕನೊಬ್ಬ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಕನ್ಯೆ ಹುಡುಕಿ ಕೊಡಿ ಎಂದು ಪತ್ರ ಬರೆದಿದ್ದಾನೆ. ಸದ್ಯ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಯುವಕ ಮುತ್ತು ಹೂಗಾರ (27) ಕಳೆದ ಏಳು ವರ್ಷದಿಂದ ಕನ್ಯಾನ್ವೇಷಣೆ ನಡೆಸುತ್ತಿದ್ದಾನೆ. ಹಳ್ಳಿಹಳ್ಳಿಗೆ ತಿರುಗಿ ಜೀವನ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾನೆ. ಆದರೆ ಬಹುತೇಕರು ಸರ್ಕಾರಿ ನೌಕರಿ ಇದ್ರೆ ಮಾತ್ರ ಕನ್ಯೆ ಅಂತಿದ್ದಾರಂತೆ. ಇದರಿಂದ ಜಿಗುಪ್ಸೆಗೊಂಡಿರೋ ಮುತ್ತು, ತನಗೊಂದು ಜೀವನದ ಸಂಗಾತಿಯನ್ನು ಹುಡುಕುವಂತೆ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದಾನೆ.
ಲಿಂಗಾಯತ ಹೂಗಾರ ಸಮಾಜದ ಮುತ್ತು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬ ನಿರ್ವಹಿಸುವಷ್ಟು ಹಣವನ್ನೂ ಸಂಪಾದಿಸುತ್ತಾರೆ. ಹೀಗಿದ್ರೂ ಕನ್ಯಾ ಮಾತ್ರ ಸಿಗ್ತಾನೇ ಇಲ್ಲ. ಸರ್ಕಾರಿ ನೌಕರಿ ಇಲ್ಲದೇ ಕನ್ಯೆ ಹುಡುಕುತ್ತಿರೋರಿಗೆ ಸರ್ಕಾರ ಏನಾದ್ರೂ ಯೋಜನೆ ತರಲಿ ಅನ್ನೋ ಕಾರಣಕ್ಕೆ ಪಿಡಿಒ ಅವರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.
ಯಾವುದೇ ಜಾತಿಯ ಕನ್ಯೆ ಇದ್ದರೂ ಪರವಾಗಿಲ್ಲ ಎಂದು ಮುತ್ತು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.










