ಕರ್ನಾಟಕದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು: ಹೈಕೋರ್ಟ್.

34

ಬೆಂಗಳೂರು: ಕರ್ನಾಟಕದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರು ವಾಣಿಜ್ಯ ಮತ್ತು ಇತರೆ ಸಂಸ್ಥೆಗಳ ಸೂಚನಾ ಫಲಕಗಳಲ್ಲಿ ಶೇ.60ರಷ್ಟು ಸೂಚನೆಗಳನ್ನು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿಯೇ ಬರೆದಿರಬೇಕೆಂಬ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಈ ಸೂಚನೆ ನೀಡಿದೆ. ಕರ್ನಾಟಕ ರಾಜ್ಯದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು ಎಂದು ಭಾರತೀಯ ರಿಟೇಲರ್ಸ್ ಅಸೋಸಿಯೇಷನ್‍ಗೆ ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಈ ಸಂಬಂಧ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಇದೆ, ಆನಂತರ ರಾಜ್ಯದಲ್ಲಿ ಕನ್ನಡ ಅಭಿಯಾನ ಆರಂಭವಾಗಲಿದೆ, ಹಾಗಾಗಿ ಈ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದಕ್ಕೆ ನ್ಯಾಯಾಲಯದ ಪೀಠವು ವಾಣಿಜ್ಯ ಸಂಸ್ಥೆಗಳು ಕರ್ನಾಟಕದಲ್ಲಿ ವಹಿವಾಟು ನಡೆಸುತ್ತಿದ್ದ ಮೇಲೆ ಅವರು ಕನ್ನಡ ಭಾಷೆಯಲ್ಲಿಯೇ ಸೂಚನಾ ಫಲಕಗಳನ್ನು ಪ್ರದರ್ಶಿಸಲೇಬೇಕು, ಅದಕ್ಕೆ ಯಾವುದೇ ವಿನಾಯ್ತಿ ನೀಡಲಾಗದು ಎಂದು ಮೌಖಿಕವಾಗಿ ಹೇಳಿದರು.
ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಬೆಳವಣಿಗೆಯ ಕಾಯಿದೆ 2022ಗೆ ತಿದ್ದುಪಡಿ ತರುವ ಮೂಲಕ 2024ರ ಫೆಬ್ರವರಿ 26ರಂದು ಸರ್ಕಾರ ಎಲ್ಲ ವಾಣಿಜ್ಯ ಸಂಸ್ಥೆಗಳು ತಮ್ಮ ಬೋರ್ಡ್‍ಗಳಲ್ಲಿ ಶೇ.60ರಷ್ಟು ಕಡ್ಡಾಯವಾಗಿ ಕನ್ನಡ ಬಳಕೆ ಮಾಡಲೇಬೇಕೆಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದು, ಅದು ಅಸಂವಿಧಾನಿಕ ಹಾಗೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಮತ್ತು ಟ್ರೇಡ್ ಮಾರ್ಕ್ ಕಾಯ್ದೆಯ ವಿರುದ್ಧವಾಗಿದೆ. ಹಾಗಾಗಿ ತಿದ್ದುಪಡಿ ರದ್ದುಗೊಳಿಸಬೇಕೆಂದು ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ.