ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ – ಮೇ 10ರಂದು ಮತದಾನ, 13ಕ್ಕೆ ಫಲಿತಾಂಶ…

51
firstsuddi

ನವದೆಹಲಿ/ಬೆಂಗಳೂರು : ಕರ್ನಾಟಕ ವಿಧಾನಸಭೆ 2023ರ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10 ರಂದು ಚುನಾವಣೆ ನಡೆಯಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, ಮೇ 10ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ. ಅಲ್ಲದೇ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದರು.

ಏಪ್ರಿಲ್ 13ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 21 ನಾಮಪತ್ರ ಪರಿಶೀಲನೆ ನಡೆಲಿದ್ದು, ಏಪ್ರಿಲ್ 24 ನಾಮಪತ್ರ ವಾಪಸ್ಸಿಗೆ ಕೊನೆಯ ದಿನವಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ 5,21,73579 ಒಟ್ಟು ಮತದಾರರಿದ್ದು, 2, 62,42, 561 ಪುರುಷರು, 2,59,26,319 ಮಹಿಳೆಯರು, 4,699 ತೃತೀಯ ಲಿಂಗಿ ಹಾಗೂ 5.55 ಲಕ್ಷ ದಿವ್ಯಾಂಗ ಮತದಾರರಿದ್ದಾರೆ. 9.17.241 ಮಂದಿ ಮೊದಲ ಸಲ ಮತದಾನ ಮಾಡುತ್ತಿದ್ದಾರೆ. 58,282 ಒಟ್ಟು ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತಿದೆ. ಒಂದೊಂದು ಮತಗಟ್ಟೆಗೆ 883 ಮಂದಿ ಮತದಾರರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ನಗರ ಪ್ರದೇಶದಲ್ಲಿ 24,063, ಗ್ರಾಮೀಣ ಭಾಗದಲ್ಲಿ 34,219 ಹಾಗೂ 1320 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇನ್ನು ಯುವಕರಿಗಾಗಿ 224 ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಹೇಳಿದರು.

ಕರ್ನಾಟಕದ 224 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ 118, ಕಾಂಗ್ರೆಸ್ 69, ಜೆಡಿಎಸ್ ಶಾಸಕರ ಬಲಾಬಲ 31, ಇತರೆ 3, ಹಾಗೂ ಖಾಲಿ 3 ಇದೆ. ರಾಜ್ಯದಲ್ಲಿ ಈಗಾಗಲೇ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಜನತಾ ದಳ, ಹಾಗೂ ಆಮ್ ಆದ್ಮಿ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ.