ಬೆಂಗಳೂರು : ಕೊರೊನಾ ಪರಿಸ್ಥಿತಿ ಕೈ ಮೀರುತ್ತಿರುವ ಹಿನ್ನೆಲೆ ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪನವರ ಕಾವೇರಿ ನಿವಾಸದಲ್ಲಿ ತುರ್ತು ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ 8 ನಗರಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದೆ, ಅದು ಏಪ್ರಿಲ್ 20ರವರೆಗೆ ಮುಂದುವರಿಯುತ್ತದೆ. ಇಂದಿನ ಸಭೆಯಲ್ಲಿ ಯಾವುದೇ ರೀತಿಯ ತೀರ್ಮಾನವಾಗಿಲ್ಲ. ಮುಂದೆ ಏನು ಮಾಡಬೇಕೆಂಬ ಬಗ್ಗೆ ಏ.20ರಂದು ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಪ್ರಧಾನಿ ಅವರ ಸಲಹೆ ಹಾಗೂ ಬೇರೆ ಬೇರೆ ರಾಜ್ಯಗಳ ಸಲಹೆ ಪಡೆದು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದರು.
ನಮ್ಮ ರಾಜ್ಯವನ್ನು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಬೇಡಿ. ನಮ್ಮ ರಾಜ್ಯಕ್ಕೂ ಬೇರೆ ರಾಜ್ಯಕ್ಕೂ ಪರಿಸ್ಥಿತಿ ಬೇರೆ ಇದೆ. ಏಪ್ರಿಲ್ 20ರವರೆಗೆ ಯಾವುದೇ ಬದಲಾವಣೆ ಇಲ್ಲ. ಆನಂತರ ಕೊರೊನಾ ನಿಯಂತ್ರಣಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪನವರು ತಿಳಿಸಿದರು.










