ಕರ್ರಿ ಮಾಡಿ ಅನ್ನ ಮಾಡಿಲ್ಲ ಅಂತಾ ಪತ್ನಿಯನ್ನೆ ಕೊಲೆಗೈದ ಪಾಪಿ ಪತಿ…

55
firstsuddi

ಭುವನೇಶ್ವರ: ಕರ್ರಿ ಮಾಡಿ ಅನ್ನ ಮಾಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಕೊಲೆಗೈದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ನಿನ್ನೆ ಬಂಧಿಸಿರುವ ಘಟನೆ ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಜಮನಕಿರಾ ಪೊಲೀಸ್ ಠಾಣಾ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ಪತಿ ಸನಾತನ ಧಾರುವಾ (40)ನನ್ನ ಬಂಧಿಸಲಾಗಿದೆ. ಮೃತ ಪತ್ನಿ ಪುಷ್ಪಾ (35) ಎಂದು ಗುರುತಿಸಲಾಗಿದೆ.

ಸನಾತನ್ ಧಾರುವಾ ಮತ್ತು ಅವರ ಪುಷ್ಪಾ ಅವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗನಿದ್ದಾರೆ. ಅವರ ಮಗಳು ಕುಚಿಂದಾದಲ್ಲಿ ಮನೆಗೆಲಸ ಮಾಡುತ್ತಿದ್ದು, ಮಗ ಭಾನುವಾರ ರಾತ್ರಿ ಮಲಗಲು ತನ್ನ ಸ್ನೇಹಿತನ ಮನೆಗೆ ಹೋಗಿದ್ದ ಎಂದು ತಿಳಿದುಬಂದಿದೆ.

ಮಕ್ಕಳು ಮನೆಯಲ್ಲಿ ಇಲ್ಲದ ವೇಳೆ ಪತಿ ಸನಾತನ್ ಧಾರುವಾ ಮನೆಗೆ ವಾಪಸ್ ಆಗಿದ್ದು, ಈ ವೇಳೆ ರಾತ್ರಿ ಪುಷ್ಪಾ ಕರ್ರಿಯನ್ನು ಮಾತ್ರ ಮಾಡಿದ್ದು, ಅದರ ಜೊತೆಗೆ ಅನ್ನ ಮಾಡಿರಲಿಲ್ಲ. ಈ ಕಾರಣವೇ ಗಂಡ – ಹೆಂಡತಿ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಈ ಸಮಯದಲ್ಲಿ ಸನಾತನ್ ಧಾರುವಾ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಪತ್ನಿಯನ್ನು ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ಮಹಿಳೆಯ ಮಗ ಮನೆಗೆ ಹಿಂತಿರುಗಿದ ಬಳಿಕ ತಾಯಿ ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ. ನಂತರ ಮಗ ಮಾಹಿತಿ ನೀಡಿದ್ದು, ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.