ಹಾಸನ: ಗ್ರಾಮದಲ್ಲಿ ಪ್ರತ್ಯೇಕ ಮತಗಟ್ಟೆ ತೆರೆಯುವಂತೆ ಒತ್ತಾಯಿಸಿ ಬೋವಿ ಕಾಲೋನಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬೋವಿ ಕಾಲೋನಿ ಗ್ರಾಮಸ್ಥರು ಬೇಲೂರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ನಮ್ಮ ಕಾಲೋನಿ ಗ್ರಾಮದಲ್ಲಿ 550 ಮತದಾರರಿದ್ದಾರೆ. ಮತದಾನ ಮಾಡಲು ಎರಡು ಕಿಲೋ ಮೀಟರ್ ಹೋಗಿ ನರಸೀಪುರ ಗ್ರಾಮದಲ್ಲಿ ಮತ ಚಲಾಯಿಸಬೇಕು.
ಗ್ರಾಮದಲ್ಲಿ ವಯೋವೃದ್ಧರು, ಅನಾರೋಗ್ಯ ಪೀಡಿತರಿದ್ದಾರೆ. ಎರಡು ಕಿಲೋ ಮೀಟರ್ ಹೋಗಿ ಮತದಾನ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಬೋವಿ ಕಾಲೋನಿಯಲ್ಲೇ ಮತಗಟ್ಟೆ ತೆರೆಯಿರಿ ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ 2,000 ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಮತಗಟ್ಟೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 6 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.










