ಕಲೆಕ್ಷನ್ ವಿಚಾರದಲ್ಲಿ ತೆವಳಿಕೊಂಡು ಸಾಗುತ್ತಿರುವ ಎಮರ್ಜೆನ್ಸಿ ಸಿನಿಮಾ.

42

ಕಂಗನಾ ರಣಾವತ್ ಅವರ ನಿರ್ದೇಶನ ಮತ್ತು ನಟನೆಯ ಎಮರ್ಜೆನ್ಸಿ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಸಾಕಷ್ಟು ಕಷ್ಟಗಳನ್ನು ಮೀರಿ ಈ ಚಿತ್ರ ರಿಲೀಸ್ ಆಯಿತು. ಆದರೆ, ಸಿನಿಮಾ ಅಂದುಕೊಂಡ ರೀತಿಯ ಕಲೆಕ್ಷನ್ ಮಾಡುತ್ತಿಲ್ಲ. ಈ ವಿಚಾರ ಕಂಗನಾಗೆ ಬೇಸರ ಮೂಡಿಸಿದೆ. ಹೀಗೆ ಮುಂದುವರಿದರೆ ಸಿನಿಮಾ ಲಾಭ ಕಾಣೋದು ಕಷ್ಟ ಆಗಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಎಮರ್ಜೆನ್ಸಿ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲಿದೆ ಎಂದು ಕಂಗನಾ ಅಂದುಕೊಂಡಿದ್ದರು. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರ ಸಾಕಷ್ಟು ವಿವಾದಗಳನ್ನೇನೋ ಮಾಡಿತು. ಆದರೆ, ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲು ಸಿನಿಮಾ ವಿಫಲವಾಗಿದೆ. ಎಮರ್ಜೆನ್ಸಿ ಸಿನಿಮಾ ಮೊದಲ ದಿನ 2.50 ಕೋಟಿ ರೂ, 2ನೇ ದಿನ 3.50 ಕೋಟಿ ರೂ. ಹಾಗೂ 4ನೇ ದಿನ 4.35 ಕೋಟಿ ರೂ. ಗಳಿಸಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ ಹತ್ತು ಕೋಟಿ ರೂ.ಗೆ ಸೀಮಿತವಾಗಿದೆ. ಕಂಗನಾ ಇಟ್ಟುಕೊಂಡ ನಿರೀಕ್ಷೆಗೂ ಗಳಿಕೆಯ ಲೆಕ್ಕಕ್ಕೂ ಅಜಗಜಾಂತರ ವ್ಯತ್ಯಾಸ ಆಗಿದೆ. ಇದರಿಂದ ಸಿನಿಮಾ ತೆವಳಿಕೊಂಡು ಸಾಗುತ್ತಿದೆ.