ಬೆಂಗಳೂರು: ಎನ್‍ಪಿಎಸ್ ಯೋಜನೆಯ ರದ್ದತಿಗೆ ಒತ್ತಾಯಿಸಿ ಫೆಬ್ರವರಿ 7 ರಂದು ಒಪಿಎಸ್ ಹಕ್ಕೊತ್ತಾಯ ಧರಣಿ ನಡೆಸಲು ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ ತೀರ್ಮಾನಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘವು 2022ರ ಅಕ್ಟೋಬರ್ 13ರಿಂದ 1 ತಿಂಗಳು ಒಪಿಎಸ್ ಸಂಕಲ್ಪ ಯಾತ್ರೆ ಹಾಗೂ 14 ದಿನಗಳ ಕಾಲ ಒಪಿಎಸ್ ಜಾರಿಗಾಗಿ ಫ್ರೀಡಂ ಪಾರ್ಕ್‍ಲ್ಲಿ ಅಹೋ ರಾತ್ರಿ ಧರಣಿ ನಡೆಸಲಾಗಿತ್ತು. ಜನವರಿ ತಿಂಗಳಿಂದ 3 ತಿಂಗಳ ಕಾಲ ವೋಟ್ ಫಾರ್ ಒಪಿಎಸ್ ಅಭಿಯಾನ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಎನ್‍ಪಿಎಸ್ ಯೋಜನೆ ರದ್ದುಗೊಳಿಸುವ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು ಎಂದು ತಿಳಿಸಿದೆ.. ಮುಖ್ಯಮಂತ್ರಿಯವರು ಅಧಿಕಾರ ವಹಿಸಿಕೊಂಡ ತಕ್ಷಣ ನಮ್ಮ ಸಂಘದ ಪದಾಧಿಕಾರಿಗಳೊಂದಿಗೆ 2023ರ ಜೂನ್ 13ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಭರವಸೆ ನೀಡಿದ್ದರು. ಎನ್‍ಪಿಎಸ್ ಯೋಜನೆಯನ್ನು ರದ್ದುಗೊಳಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು. ಸಿಎಂ 2024ರ ಜನವರಿ 6 ರಂದು ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮುಂದಿನ ಸಂಪುಟ ಸಭೆಯಲ್ಲಿ ಎನ್‍ಪಿಎಸ್ ಯೋಜನೆಯ ರದ್ದತಿಯ ವಿಷಯವನ್ನು ಸಂಪುಟದ ಸಹದ್ಯೋಗಿಗಳೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು ಎಂದು ಪ್ರಕಟಣೆಯಲ್ಲಿ ಸಂಘ ಮಾಹಿತಿ ನೀಡಿದೆ.










