ಕಳಸ : ಅರಣ್ಯಕ್ಕೆ ಪ್ರಸ್ತಾವನೆ ಇಟ್ಟಿದ್ದ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬಾರದೆಂದು ಮಾವಿನಕೆರೆ ಗ್ರಾಮಸ್ಥರ ಒತ್ತಾಯ…

251
firstsuddi

ಕಳಸ : ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೆರೆ ಗ್ರಾಮದ ಸರ್ವೆ 641 ರಲ್ಲಿ ಸೆಕ್ಷನ್ -4ರ ಅಡಿ ಮೀಸಲು ಅರಣ್ಯಕ್ಕೆ ಪ್ರಸ್ತಾವನೆ ಇಟ್ಟಿದ್ದ 40.27 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆಗೆ ನೀಡಬಾರದು ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.
ಇಂದು ಕಳಸ ಗ್ರಾಮ ಪಂಚಾಯಿಲ್ಲಿ ನಡೆದ ಗ್ರಾಮ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನು ಮಾಡಲಾಯಿತು. ಕಳಸ ತಾಲ್ಲೂಕು ಕೇಂದ್ರ ಘೋಷನೆಯಾಗಿದೆ. ಅಭಿವೃದ್ಧಿಯ ನೆಲೆಯಲ್ಲಿ ಸಾಕಷ್ಟು ಭೂಮಿಯ ಅಗತ್ಯವಿದೆ ಅಲ್ಲದೆ ಈ ಪ್ರದೇಶದಲ್ಲಿ ಮನೆಗಳು, ದೇವಸ್ಥಾನ ಇದೆ ಆದ್ದರಿಂದ ಈ ಭೂಮಿಯನ್ನು ಅರಣ್ಯ ಉಲಾಖೆಗೆ ನೀಡಬಾರದು ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಬೇಕು ಎನ್ನುವ ಗ್ರಾಮಸ್ಥರ ಆಗ್ರಹದ ಮೇರೆಗೆ ನಿರ್ಣಯ ಕೈಗೊಳ್ಳಲಾಯಿತು.
ಕಳಸ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆಯಾಗಿ ಆರು ತಿಂಗಳು ಕಳೆದರೂ ಕೂಡ ಗ್ರಾಮ ಪಂಚಾಯಿತಿಗೆ ಮೆಸ್ಕಾಂ ಇಲಾಖೆ ಅಧಿಕೃತವಾಗಿ ವಿದ್ಯುತ್ ಸರಭರಾಜು ನೀಡುತ್ತಿಲ್ಲ. ಇಲ್ಲ ಸಲ್ಲದ ಕಾರಣಗಳನ್ನು ಹೇಳುತ್ತಿದೆ. ಈಗ ಕೆಲ ದಿನಗಳ ಹಿಂದೆಯಷ್ಟೆ ಪಂಚಾಯಿತಿಯಿಂದ 3 ಸಾವಿರ ಬಿಲ್ ಬಾಕಿ ಇದೆ ಎನ್ನುವ ಪತ್ರವನ್ನು ಕಳುಹಿಸಿದೆ. ಒಂದು ಸರ್ಕಾರಿ ಕಛೇರಿಗೆ ವಿದ್ಯುತ್ ನೀಡದ ಮೆಸ್ಕಾಂ ಇಲಾಖೆ ಇನ್ನು ಸಾಮಾಣ್ಯ ಜನರಿಗೆ ಯಾವ ರೀತಿ ಸ್ಪಂದಿಸಬಹುದು. ದಂಬೆದಡಿ ಸೈಟ್ ನಲ್ಲಿ ಕೈಗೆಟುಕುವ ರೀತಿಯಲ್ಲಿ ವಿದ್ಯುತ್ ಲೈನ್ ಹಾದು ಹೋಗಿದೆ. ಮನೆಗಳಿಗೆ ಸರಿಯಾಗಿ ವಿದ್ಯುತ್ ಬಿಲ್ ನೀಡುತ್ತಿಲ್ಲ ಪ್ರತೀ ಗ್ರಾಮ ಸಭೆಯಲ್ಲೂ ಇದೇ ಚರ್ಚೆ ಆಗುತ್ತಿದೆ ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಸ್ಪಂದಿಸದಿದ್ದರೆ ಇಂತಹ ಗ್ರಾಮ ಸಭೆಯನ್ನು ಮಾಡುವ ಅಗತ್ಯವಿದೆಯೇ ಎಂದು ಮೆಸ್ಕಾಂ ಅಧಿಕಾರಿಯ ವಿರುದ್ಧ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಕಾಶ್ ಕುಮಾರ್, ಮಾಜಿ ಸದಸ್ಯ ಸಂತೋಷ್ ಹಿನಾರಿ, ರಂಗನಾಥ್ ಕಿಡಿ ಕಾರಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೊನ್ನೇ ಕಾಡು ನೀರಿನ ಕಾಮಗಾರಿ ಡಿಸೆಂಬರ್ ಒಳಗೆ ಮುಗಿಯಲಿದೆ. ಈ ಬಗ್ಗೆ ಮುಖ್ಯ ರಸ್ತೆಯಲ್ಲಿ ಪೈಪ್ ಹಾದು ಹೋಗುವುದರಿಂದ ರಸ್ತೆಯ ಕಾಂಕ್ರೇಟಿಕರಣವನ್ನು ಅಗೆಯಲು ಅನುಮತಿಯನ್ನು ಲೋಕೋಪಯೋಗಿ ಇಲಾಖೆಯ ಕೇಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಇಂಜಿನೀಯರ್ ನಟರಾಜ್ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಮುಖ್ಯ ರಸ್ತೆ ಈಗಾಗಲೇ ವ್ಯವಸ್ಥಿತವಾಗಿದೆ ಆದ್ದರಿಂದ ಮತ್ತೆ ರಸ್ತೆಯನ್ನು ಅಗೆಯಕೂಡದು ಪರ್ಯಯ ದಾರಿಯನ್ನು ಹುಡುಕಿ ಎಂದರು.ಇನ್ನೊಂದು ಸಭೆಯನ್ನು ಕರೆದು ಈ ಬಗ್ಗೆ ಚರ್ಚೆ ಮಾಡುವ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್ ತಿಳಿಸಿದರು.
ಕಳಸ ಸರ್ವೆ ನಂ 85ರಲ್ಲಿ ಕಳಸ ಬಾಗದ ನಿವೇಶನ ರಹಿತರಿಗೆ ಮೀಸಲಿಟ್ಟ 5 ಎಕರೆ ಭೂಮಿಯಲ್ಲಿ 93 ಜನರನ್ನು ಆಯ್ಕೆ ಮಾಡಲಾಗಿದೆ.ಉಳಿದವರಿಗೆ ಸಂತ್ರಸ್ಥರಿಗೆ ಮೀಸಲಿಟ್ಟ ಭೂಮಿಯಲ್ಲಿ ಮತ್ತು ಹೆಚ್ಚುವರಿ ಭೂಮಿ ಮಂಜೂರು ಮಾಡಿ ನಿವೇಶನ ನೀಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ್ ಸಭೆಯಲ್ಲಿ ತಿಳಿಸಿದಾಗ ಆಕ್ಷೇಪ ವ್ಯಕ್ತ ಪಡಿಸಿದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಈ ಹಿಂದೆ ಗ್ರಾಮ ಪಂಚಾಯಿತಿ ಸಭೆಗಳಲ್ಲಿ 197 ಫಲಾನುಭವಿಗಳಿಗೆ ನಿವೇಶನ ನೀಡುವ ಬಗ್ಗೆ ಪಟ್ಟಿಯನ್ನು ಅಂತಿಮ ಮಾಡಲಾಗಿತ್ತು.ಆದರೆ ಈಗ ಅದನ್ನು ತಿದ್ದು ಪಡಿ ಮಾಡಿ 93 ಫಲಾನುಭವಿಗಳಿಗೆ ಮಾತ್ರ ನೀಡುವುದು ಸರಿಯಲ್ಲ.ಹಿಂದೆ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಏನು ಉತ್ತರ ಕೊಡುವುದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್.ತಾಲ್ಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ರಫೀಕ್,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತಿರವೀಂದ್ರ ಇದ್ದರು.