ಕಳಸ : ಆನೆ ಗುಡ್ಡದಲ್ಲಿ ಬಿರುಕು-ಸ್ಥಳೀಯರಲ್ಲಿ ಆತಂಕ…

271
firstsuddi

ಕಳಸ : ತಾಲ್ಲೂಕಿನ ಸುತ್ತಮುತ್ತಲ ಬೆಟ್ಟಗಳ ಸಾಲಿನಲ್ಲಿ ಅತ್ಯಂತ ಎತ್ತರದ ಗುಡ್ಡಗಳಲ್ಲಿ ಒಂದಾದ ಆನೆ ಗುಡ್ಡವು ಬೃಹತ್ ಸ್ಪೋಟಗೊಂಡು, ಬಂಡೆಗಳು ಜಾರಿ ಬಿರುಕು ಬಿಟ್ಟು ಮಳೆಗಾಲದ ಮುನ್ನವೇ ಅಪಾಯದ ಮುನ್ಸೂಚನೆ ಕಾಣುತ್ತಿರುವುದು ಈ ಭಾಗದ ನೂರಾರು ಕುಟುಂಬಗಳು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೊಂದಿಕೊಂಡಿರುವ ಆನೆಗುಡ್ಡವು ಕಳಸದಿಂದ ಸುಮಾರು 9ಕಿ.ಮೀ ದೂರ ಇರುವ, ಸರಿಸುಮಾರು 1500 ಮೀ ಎತ್ತರದ ಸುಮಾರು 3-4 ಕಿ.ಮೀ ವ್ಯಾಪಿಸಿರುವ ಈ ಬೃಹತ್ ಗಾತ್ರದ ಗುಡ್ಡದಿಂದ ಕಳೆದ ಶನಿವಾರ ಬೆಳಗ್ಗಿನ ಜಾವ 6.15ರ ಸುಮಾರಿಗೆ ಸ್ಪೋಟಗೊಂಡ ಶಬ್ದ ಕೇಳಿ ಬಂದಿದೆ. ಮತ್ತದೇ ದಿನ ಎರಡು ಮೂರು ಬಾರಿ ಗುಡ್ಡದ ಕಡೆಯಿಂದ ಭಾರಿ ಶಬ್ದ ಕೇಳಿ ಬಂದಿದೆ. ಆತಂಕಗೊಂಡ ಸ್ಥಳಿಯ ಕೆಲ ಯುವಕರು ಗುಡ್ಡದ ಬುಡ ಭಾಗಕ್ಕೆ ತಲುಪಿ ನೋಡಿದಾಗ ಮೇಲ್ಬಾಗದಿಂದ ಬಂಡೆಯೊಂದು ಉರುಳಿ ಬಂದಿರುವುದು ಕಂಡು ಬಂದಿದೆ. ಇದರ ಜಾಡನ್ನು ಹಿಡಿದು ಗುಡ್ಡ ಹತ್ತಿ ನೋಡಿದಾಗ ಆ ಪ್ರದೇಶ ಬಿರುಕುಗಳು ಬಿಟ್ಟು ಗುಡ್ಡದ ಒಂದು ಭಾಗ ಸ್ಪೋಟಗೊಂಡು ಕಲ್ಲುಗಳು ಜಾರಿರುವುದು ಮತ್ತು ಕಲ್ಲುಗಳು ಚೂರಾಗಿರುವುದು ಕಂಡು ಬಂದಿದೆ. ಗುಡ್ಡದ ಅರ್ದ ಭಾಗಕ್ಕೆ ಮಾತ್ರ ಸದ್ಯಕ್ಕೆ ತೆರಳಲು ಸಾದ್ಯವಾಗುತ್ತಿರುವ ಹಿನ್ನಲೆಯಲ್ಲಿ ಗುಡ್ಡದ ತುದಿಯ ಭಾಗದಲ್ಲಿ ಯಾವ ರೀತಿಯ ಅನಾಹುತಗಳು ಸಂಭವಿಸಿದೆ ಅನ್ನುವುದು ತಿಳಿಯುತ್ತಿಲ್ಲ. ಕೆಲಭಾಗದಿಂದ ನೋಡುವಾಗ ಗುಡ್ಡದ ತುದಿಯ ಭಾಗ ಕಲ್ಲುಗಳು ಬಿರುಕು ಬಿಟ್ಟ ಸ್ಥಿತಿಯಲ್ಲಿರುವುದು ಕಂಡು ಬರುತ್ತಿದೆ.
ಅಪಾಯದ ಸ್ಥಳಗಳು
ಈ ಗುಡ್ಡಕ್ಕೆ ಹೊಂದಿಕೊಂಡು ಬೆಟ್ಟಗೇರಿ, ನೆಲ್ಲಿಕೋಟ, ಕಡೇಮನೆ, ಲಲಿತಾದ್ರಿ, ವಡಬೇರೆ, ಅಜ್ಜಯ್ಯನಮನೆ, ವಲ್ಲಿಕುಡಿಗೆ, ಸಂಪಿಗೆಗದ್ದೆ ಕಾಲೋನಿ, ಕೆರ್ನಾಳಿ, ಕೋಡಿಗೆಹಿತ್ಲು, ಹೊಕ್ಕಲಿಮನೆ, ಕೆಳವಲ್ಲಿಕುಡಿಗೆ, ಮುಜೆಖಾನ್, ಗುಡ್ಡೆತೋಟ ಎಂಬ ಉಪಗ್ರಾಮಗಳು ಬರುತ್ತವೆ. ಇಲ್ಲಿ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ವಾಸಮಾಡುತ್ತಿವೆ. ಒಂದು ವೇಳೆ ಈ ಗುಡ್ಡ ಜಾರಿ ಬಿದ್ದಲ್ಲಿ ಇಷ್ಟೂ ಗ್ರಾಮಗಳು ತೊಂದರೆ ಅನುಭವಿಸಬೇಕಾಗಬಹುದು. ಅಲ್ಲದೆ ಇದು ಭದ್ರಾ ನದಿಗೂ ಅಪಾಯವನ್ನು ತಂದೊಡ್ಡಬಲ್ಲದು.