ಕಳಸ : ತಾಲ್ಲೂಕು ಕೇಂದ್ರ ಘೋಷಣೆಯಾಗಿ ವರ್ಷ ಕಳೆದರೂ ಕೂಡ ಕಾರ್ಯಾರಂಭ ಆಗದೆ ಇರುವ ಹಿನ್ನಲೆಯಲ್ಲಿ ಕಳಸ ಹೋಬಳಿಯಲ್ಲಿ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿ ಚುನಾವಣಾ ಬಹಿಷ್ಕಾರ ಮತ್ತು ಇದೇ ಭಾನುವಾರ ಪ್ರತಿಭಟನೆಯನ್ನು ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ.
ಬುಧವಾರ ಸಂಜೆ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳು ಸಭೆಗೆ ಗೈರಾಗಿದ್ದರು. ಉಳಿದಂತೆ ಜೆಡಿಎಸ್, ಕಾಂಗ್ರೇಸ್, ಭಾರತೀಯ ಕಮ್ಯೂನೀಷ್ಟ್ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಡಾ|ರಾಜ್ ಕನ್ನಡ ಸಂಘದ ಮುಖಂಡರುಗಳು ಭಾಗವಹಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ತಾಲ್ಲೂಕು ಕೇಂದ್ರ ಘೋಷಣೆಯಾಗಿ ವರ್ಷ ಕಳೆದರೂ ಕೂಡ ಕಾರ್ಯಾರಂಭ ಮಾಡಲಿಲ್ಲ. ಒಂದು ವರ್ಷದಿಂದ ತಾಲ್ಲೂಕು ಕಾರ್ಯಾರಂಭ ಮಾಡಿ ಎಂದು ಒತ್ತಡ ಹಾಕಿದರೂ ಕೂಡ ಗಮನಹರಿಸಿಲ್ಲ. ಇದಕ್ಕಾಗಿ ಜನಪ್ರತಿನಿಧಿಗಳನ್ನು ಮತ್ತು ಸರ್ಕಾರವನ್ನು ಎಚ್ಚರಿಸಲು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದೇ ಸೂಕ್ತ. ಅದಕ್ಕಿಂತ ಮುಂಚಿತವಾಗಿ ಚುನಾವಣಾ ಬಹಿಷ್ಕಾರದ ಸಾಧಕ ಬಾಧಕÀಗಳನ್ನು ಹಳ್ಳಿ ಹಳ್ಳಿಗೆ ತೆರಳಿ ಮತದಾರರಿಗೆ ತಿಳಿಸಿ ಮತದಾರರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಬೇಕು. ಇದಕ್ಕಾಗಿ ಇದೇ ಭಾನುವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕು ಎಂದರು.
ಕಾಂಗ್ರೇಸ್ ಮುಖಂಡ ಕೆ.ಆರ್.ಪ್ರಭಾಕರ್ ಅವರು ಮಾತನಾಡಿ ಕಳಸ ತಾಲ್ಲೂಕು ಜೆಡಿಎಸ್ ಮತ್ತು ಕಾಂಗ್ರೇಸ್ ಸಮ್ಮಿಶ್ರ ಸರ್ಕಾರ ಇರುವಾಗ ಘೋಷಣೆಯಾಗಿದೆ ನಂತರದ ಸರ್ಕಾರ ಇದನ್ನು ಕಾರ್ಯಾರಂಭ ಮಾಡಲಿಲ್ಲ. ಕಳಸ ತಾಲ್ಲೂಕು ಕೇಂದ್ರ ಘೋಷಣೆಯಾದ ಮೇಲೆ ರಾಜ್ಯದಲ್ಲಿ ಜಿಲ್ಲೆ, ತಾಲ್ಲೂಕು, ಪಟ್ಟಣ ಪಂಚಾಯಿತಿಯನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ ಕಳಸದ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದಕ್ಕೆ ದೊಡ್ಡ ಮಟ್ಟದ ಚಳುವಳಿ ಅನಿವಾರ್ಯವಿದೆ ಮತ್ತು ಇದಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದರು.
ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಅವರು ಮಾತನಾಡಿ ಈ ಭಾಗದ ಶಾಸಕರು ಆಸಕ್ತಿ ವಹಿಸದೆ ಇರುವುದೇ ತಾಲ್ಲೂಕು ಕಾರ್ಯಾರಂಭದ ಹಿನ್ನಡೆಗೆ ಕಾರಣವಾಗಿದೆ. ಸ್ಥಳಿಯ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸರ್ಕಾರ ಮನ್ನಣೆ ನೀಡುತ್ತಿಲ್ಲ. ಆದ್ದರಿಂದ ಸರ್ಕಾರವನ್ನು ಎಚ್ಚರಿಸಲು ಚುನಾವಣಾ ಬಹಿಷ್ಕಾರ ಅನಿವಾರ್ಯ ಎಂದರು.
ಕಾಂಗ್ರೇಸ್ ಮುಖಂಡ ರಾಜೇಂದ್ರ ಹಿತ್ಲುಮಕ್ಕಿ ಅವರು ಮಾತನಾಡಿ ಹಿಂದೆ ಕಳಸ ತಾಲ್ಲೂಕು ಕೇಂದ್ರವಾಗಬೇಕು ಎಂದು ಪಾದಯಾತ್ರೆ ಮಾಡಿದ ಇದೇ ಬಿಜೆಪಿ ಮುಖಂಡರು ಇಂದು ಅವರೇ ಎಂಎಲ್‍ಎ, ಎಂಎಲ್‍ಸಿ ಆಗಿದ್ದಾರೆ ಇವರಿಗೆ ಮುಖ್ಯಮಂತ್ರಿ ಬಳಿ ಹೋಗಿ ಕೇಳುವ ಧೈರ್ಯವೇ ಇಲ್ಲ. ಆದ್ದರಿಂದ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಅಂತಿಮವಾಗಿ ಹೋಬಳಿಯ ಆರು ಗ್ರಾಮ ಪಂಚಾಯಿತಿಯ ವ್ಯಾಪ್ತಿ ಗ್ರಾಮ ಪಂಚಾಯಿತಿ ಚುನಾವಣಾ ಬಹಿಷ್ಕಾರ ಮತ್ತು ಇದೇ ಭಾನುವಾರ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಯನ್ನು ಮಾಡುವುದಾಗಿ ಒಮ್ಮತದ ತೀರ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮಹಮ್ಮದ್ ರಫೀಕ್, ಬ್ರಹ್ಮದೇವ, ಆಶಾಲತಾ ಜೈನ್, ಜ್ವಾಲನಯ್ಯ, ಕಾಂಗ್ರೇಸ್ ಮುಖಂಡರಾದ ಶ್ರೇಣಿಕ್, ವಿಶ್ವನಾಥ, ಕರವೇ ಅಧ್ಯಕ್ಷ ಶ್ಯಾಮಚಾರಿ, ಡಾ|ರಾಜ್ ಕನ್ನಡ ಸಂಘದ ಅಧ್ಯಕ್ಷ ರಾಜು, ಕೆಕೆಬಿ ಮಾಲಿಕ ಬಾಲಕೃಷ್ಣ ಭಟ್ ಇದ್ದರು.










