ಕಳಸ : ತಮ್ಮ ರಸ್ತೆಯನ್ನು ತಾವೇ ದುರಸ್ಥಿ ಮಾಡಿ ಸರಿಪಡಿಸಿಕೊಂಡ ಹಳುವಳ್ಳಿ-ಕಡೇಮನೆ ಗ್ರಾಮಸ್ಥರು…

679
firstsuddi

ಕಳಸ : ಹಳುವಳ್ಳಿ-ಕಡೇಮನೆ ಗ್ರಾಮಸ್ಥರು ತಮ್ಮ ರಸ್ತೆಯನ್ನು ತಾವೇ ದುರಸ್ಥಿ ಮಾಡಿಕೊಂಡು ಸರಿಪಡಿಸಿಕೊಂಡರು. ಹಳುವಳ್ಳಿಯಿಂದ ನಾಗರಕುಡಿಗೆ, ವಲ್ಲಿಕುಡಿಗೆ, ಅಜ್ಜಯ್ಯನ ಮನೆ, ಸಂಪಿಗೆ ಗದ್ದೆ, ವಡಬೇರಿ, ಲಲಿತಾಧ್ರಿ, ಕಡೆಮನೆ ಸಂಪರ್ಕಿಸುವ ಸುಮಾರು 1.7ಕಿ.ಮೀ ರಸ್ತೆ ಚರಂಡಿಯ ನಿರ್ವಹಣೆ ಹಾಗೂ ರಸ್ತೆಯ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿತ್ತು. ಚರಂಡಿಯು ಮಣ್ಣಿನಿಂದ ಸಂಪೂರ್ಣವಾಗಿ ಮುಚ್ಚಿಕೊಂಡಿತ್ತು. ಅಲ್ಲದೆ ಗಿಡಗಂಟಿಗಳು ರಸ್ತೆಗೆ ಬಾಗಿ ಗ್ರಾಮಸ್ಥರಿಗೆ ತೊಂದರೆಯಾಗುತ್ತಿತ್ತು. ರಸ್ತೆಯಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಬಾಗದಿಂದ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಕಳಸಕ್ಕೆ ಆಗಮಿಸಬೇಕು. ಆದರೆ ರಸ್ತೆಯ ಸ್ಥಿತಿಯಿಂದ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಈ ರಸ್ತೆಯಲ್ಲಿ ಯಾವುದೇ ವಾಹನಗಳು ಬರಲು ಒಪ್ಪುತ್ತಿರಲಿಲ್ಲ. ಇದರಿಂದ ಗ್ರಾಮಸ್ಥರಿಗೆ ತೀರಾ ತೊಂದರೆ ಉಂಟಾಗುತ್ತಿತ್ತು.
ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದರೂ ಯಾರೂ ಅತ್ತ ಸುಳಿಯಲೇ ಇಲ್ಲ ಇದರಿಂದ ಗ್ರಾಮಸ್ಥರೇ ಒಟ್ಟು ಸೇರಿ ರಸ್ತೆಯ ದುರಸ್ಥಿಗೆ ಬೇಕಾಗುವ ಅನುದಾನವನ್ನು ಹೊಂದಿಸಿಕೊಂಡು ಹಿಟಾಚಿಯ ಮುಖಾಂತರ ರಸ್ತೆಯ ಅಂಚಿನಲ್ಲಿ ಚರಂಡಿಯನ್ನು ತೆಗೆದು, ರಸ್ತೆಗೆ ಚಾಚಿದ್ದ ಗಿಡಗಂಟಿಗಳನ್ನು ತೆರವು ಮಾಡಿ ಹೊಂಡಗುಂಡಿಗಳನ್ನು ಮುಚ್ಚಿ ತಮ್ಮ ಊರಿನ ರಸ್ತೆಯನ್ನು ತಾವೇ ದುರಸ್ಥಿ ಮಾಡಿಕೊಂಡರು.
ಸುಮಾರು 14 ಸಾವಿರ ರೂಗಳನ್ನು ಸಂಗ್ರಹಿಸಿ 1.7 ಕಿಮೀ ದೂರದ ರಸ್ತೆಯನ್ನು ಒಂದು ವಾರಗಳ ಕಾಲ ದುರಸ್ಥಿ ಮಾಡಿಕೊಂಡರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿ ಸರ್ಕಾರವೇ ನಮ್ಮ ರಸ್ತೆಯನ್ನು ದುರಸ್ಥಿ ಮಾಡಿಕೊಡಲಿ ಎಂದು ಕಾದು ಕುಳಿತು ರಸ್ತೆ ಸಂಪೂರ್ಣವಾಗಿ ಶಿಥಿಲವಾಗಿ ಯಾರೂ ಕೂಡ ಸಂಚಾರ ಮಾಡಲಾದ ಪರಿಸ್ಥಿತಿಯನ್ನು ತಂದೊಡ್ಡುವ ಬದಲು ನಮ್ಮ ಊರಿನ ರಸ್ತೆಯನ್ನು ತಾವೇ ದುರಸ್ಥಿ ಮಾಡಿಕೊಂಡ ಗ್ರಾಮಸ್ಥರ ಕಾರ್ಯ ಇತರರಿಗೂ ಮಾದರಿಯಾಗಲಿ.