ಕಳಸ : ಪಟ್ಟಣವನ್ನು ಸ್ವಚ್ಚವಾಗಿಡುವ ಮೂಲಕ ನಮ್ಮೇಲ್ಲರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರು ಹೆಚ್ಚಿನ ಮುತುವರ್ಜಿಸುತ್ತಿದ್ದು ಅವರೆಲ್ಲರನ್ನು ಗೌರವದಿಂದ ಕಾಣಬೇಕು ಎಂದು ಮಾಜಿ ಗ್ರಾಮ ಪಂ ಅಧ್ಯಕ್ಷ ಪ್ರಕಾಶ್ ಕುಮಾರ್ ಹೇಳಿದರು.
ಕಳಸ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಮನ್ವಂತರ ಬಳಗದಿಂದ ನಡೆದ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಟವನ್ನು ಮಾಡುತ್ತಾ ನಮ್ಮ ಆರೋಗ್ಯವನ್ನು ರಕ್ಷಿಸುವ ಇವರ ಮಹತ್ ಕಾರ್ಯವನ್ನು ಮೆಚ್ಚಲೇಬೇಕಾಗಿದೆ. ಒಂದು ದಿನ ಪೌರ ಕಾರ್ಮಿಕರು ರಜೆ ಮಾಡಿದರೆ ಊರೆಲ್ಲ ಕಸ ತುಂಬಿ ರೋಗ ರುಚಿನಗಳು ಬರುವ ಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರ ಕೂಡ ಪೌರ ಕಾರ್ಮಿಕರ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ಅವರಿಗೆ ಸೂಕ್ತ ಸೌಲಭ್ಯಗಳನ್ನು ನೀಡಬೇಕು ಎಂದರು.
ಜೆಸಿಐ ಅಧ್ಯಕ್ಷ ಕೆ.ಸಿ.ಮಹೇಶ್ ಮಾತನಾಡಿ ಗಾಳಿ, ಮಳೆ, ಚಳಿ ಎನ್ನದೆ ನಿರಂತರವಾಗಿ ಪಟ್ಟಣವನ್ನು ಸ್ವಚ್ಚ ಮಾಡುವಂತ ಮಹತ್ ಕಾರ್ಯವನ್ನು ಪೌರ ಕಾರ್ಮಿಕರು ಮಾಡುತ್ತಾರೆ. ಯಾವುದೇ ಮಹತ್ ಕಾರ್ಯ ಮಾಡದೆ ತನ್ನ ಪ್ರಭಾವಗಳನ್ನು ಬಳಸಿಕೊಂಡವರಿಗೆ ಶುಭ್ರವಾದ ಬಟ್ಟೆತೊಟ್ಟ ವ್ಯಕ್ತಿಗಳಿಗೆ ಗೌರವ ಸನ್ಮಾನಗಳು ಸಿಗುತ್ತದೆ. ಆದರೆ ದಿನ ಪೂರ್ತಿ ನಮಗಾಗಿ ನಮ್ಮ ಆರೋಗ್ಯಕಾಗಿ, ಊರಿನ ಸ್ವಚ್ಚತೆಗಾಗಿ ದುಡಿಯುವ ಕಾರ್ಮಿಕರನ್ನು ಯಾರೂ ಕೂಡ ಗಮನಿಸುವುದಿಲ್ಲ. ಈ ನಿಟ್ಟಿನಲ್ಲಿ ಮನ್ವಂತರ ಬಳಗ ಇಂತಹ ಕಾರ್ಮಿಕರನ್ನು ಗುರುತಿಸಿ ಗೌರವಿಸಿದ್ದು ಕುಷಿ ಕೊಟ್ಟಿದೆ ಎಂದರು.
ಮನ್ವಂತರ ಬಳಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಮಾತನಾಡಿ ಒಬ್ಬ ಬಡವನ ಕಷ್ಟ ಒಬ್ಬ ಬಡವನಿಗೆ ಮಾತ್ರ ಅರ್ಥವಾಗುತ್ತದೆ. ಎಲ್ಲಿ ನಾವು ಪ್ರತಿಭೆಗಳನ್ನು, ಕಷ್ಟದಲ್ಲಿರುವವರನ್ನು ಗುರುತಿಸುವುದಿಲ್ಲವೋ ಅವರು ಇನ್ನಷ್ಟು ಸಮಸ್ಯೆಗಳನ್ನು ಎದುರಿಸುತ್ತಾ ಹೋಗಬೇಕಾಗುತ್ತದೆ. ಅಂತವರ ನೆರವಿಗೋಸ್ಕರ ಬಡವರ ಮಕ್ಕಳೇ ಸೇರಿಕೊಂಡು ಮನ್ವಂತರ ತಂಡವನ್ನು ಕಟ್ಟಿಕೊಂಡು ನಮ್ಮಲ್ಲಿ ಸಾದ್ಯವಾದಷ್ಟು ನೆರವು ಮತ್ತು ಅವರನ್ನು ಗುರುತಿಸುವಂತ ಕೆಲಸವನ್ನು ಮಾಡುತ್ತಿದ್ದೇವೆ. ಇನ್ನೊಬ್ಬರ ಬಾಳಿನಲ್ಲಿ ಸಂತೋಷದ ನಗುವನ್ನು ನೋಡುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ಹನುಮಂತಪ್ಪ, ಆನಂದ, ಭರತ, ಪ್ರದೀಪ ಇವರನ್ನು ಗೌರವಿಸಲಾಯಿತು.
ಪಂಚಾಯಿತಿ ಲೆಕ್ಕಪರಿಶೋಧಕ ಸಂತೋಷ್, ಮನ್ವಂತರ ಬಳಗದ ಸದಸ್ಯರಾದ ಶ್ರೀಕಾಂತ್, ಮುರುಳಿ, ಉಮಾ. ಶಿವರಾಜ್, ಮಂಜುನಾಥ್, ಕಿರಣ್ ಇತರರು ಇದ್ದರು.










