ಕಳಸ : ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾನಸೀಕ ಅಸ್ವಸ್ಥ ವ್ಯಕ್ತಿಗೆ ಚಿಕಿತ್ಸೆ…

154

ಕಳಸ ತಾಲ್ಲೂಕಿನ ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಕಟ್ಟೆಯಲ್ಲಿ ಅತ್ಯಂತ ಬಡತನ ಮತ್ತು ಮಾನಸೀಕ ಕಾಯಿಲೆಯಿಂದ ಬಳಲುತಿದ್ದ ಲೋಕೇಶ್ ಎಂಬುವವರನ್ನು ಮಂಗಳೂರಿನ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಡಲಾಯಿತು.

ಮನೆಯಲ್ಲಿ ಕಿತ್ತು ತಿನ್ನುವ ಬಡತನ ಮನೋರೋಗಿಯಾದ ತಂದೆ ಎಸ್ಸೆಸ್ಸೆಲ್ಸಿ, ಪಿಯುಸಿ ಓದಿರುವ ಹೆಣ್ಣು ಮಕ್ಕಳು ಅನಾರೋಗ್ಯದ ಮದ್ಯೆಯೂ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ತಾಯಿ, ಶಿಥಿಲಗೊಂಡಿರುವ ಮನೆ ಇವರ ಈ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಕಳಸಕ್ಕೆ ಬಂದಿದ್ದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ತಂಡವನ್ನು ನಮ್ಮೂರು ಕಳಸ ವ್ಯಾಟ್ಸಾಪ್ ಗ್ರೂಪ್, ಮನ್ವಂತರ ತಂಡ, ಕಳಸ ಜೆಸಿಐ ಘಟಕದ ಸದಸ್ಯರುಗಳು ಸಂಪರ್ಕಿಸಿದರು. ಕೂಡಲೇ ಟ್ರಸ್ಟ್ ಮುಖ್ಯಸ್ಥ ಜೋಸೆಪ್ ಕ್ರಾಸ್ತಾ, ಜಿಯೋ ಡಿ ಸಿಲ್ವಾ, ನ್ಯಾಯವಾದಿ ನವೀನ್ ಪಾಯಸ್ ಇವರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದರು.

ಅದರಂತೆ ಇಂದು ಪತ್ರಕರ್ತ ಸುದೀಶ್ ಸುವರ್ಣ, ಜೆಸಿಐ ಕಳಸ ಘಟಕದ ಅಧ್ಯಕ್ಷ ಅಶೋಕ್ ಜಾವಳಿ, ಸದಸ್ಯರಾದ ಮಂಜುನಾಥ್, ಕೆ.ಸಿ.ಮಹೇಶ್, ಶ್ರೀಕಾಂತ್ ಇವರ ಸಹಕಾರದಿಂದ ಲೋಕೇಶ್ ಅವರಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಟ್ರಸ್ಟ್ ಮುಖಾಂತರ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು.
ಈ ಬಗ್ಗೆ ಪ್ರತಿಕ್ರೀಯಿಸಿದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಜೋಸೆಪ್, ಮಾನಸೀಕ ಅಸ್ವಸ್ಥರಾಗಿರುವ ಲೋಕೇಶ್ ಅವರನ್ನು ಅವರ ಕುಟುಂಬದ ಅನುಮತಿ ಮೇರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತೇವೆ. ಅಲ್ಲಿ ಗುಣಮುಖರಾದ ನಂತರ ಒಂದಷ್ಟು ದಿನ ನಮ್ಮ ಆಶ್ರಮದಲ್ಲಿ ಇರಿಸಿಕೊಂಡು ಅವರು ಉತ್ತಮ ಸ್ಥಿತಿಗೆ ಬಂದ ನಂತರ ಮತ್ತೆ ಅವರ ಕುಟುಂಬಕ್ಕೆ ಸೇರಿಸುತ್ತೇವೆ. ಅಲ್ಲದೆ ಅವರ ಮನೆಯ ಸ್ಥಿತಿಯು ಚಿಂತಾಜನಕವಿದ್ದು, ನಮ್ಮ ಟ್ರಸ್ಟ್ ಮತ್ತು ದಾನಿಗಳ ಮುಖಾಂತರ ಆ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿ ಕೊಡುತ್ತೇವೆ.ಅಲ್ಲದೆ ಮನೆಯಲ್ಲಿರುವ ಪಿಯುಸಿ ಓದಿ ಕಾಲೇಜು ಬಿಟ್ಟಿರುವ ಹೆಣ್ಣು ಮಗಳಿಗೆ ನರ್ಸಿಂಗ್ ಕಲಿಸಿ ಕೆಲಸ ತೆಗೆಸಿಕೊಡುವ ಜವಬ್ದಾರಿಯನ್ನು ಕೂಡ ಮಾಡುತ್ತೇವೆ ಎಂದು ಹೇಳಿದರು.