ಕಸಾಪ ಸಭೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ನಿರ್ಣಯ…

92
firstsuddi

ಚಿಕ್ಕಮಗಳೂರು : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ಮುಂದಿನ ವರ್ಷ ನಡೆಸುವ ನಿರ್ಣಯವನ್ನು ಇಲ್ಲಿನ ಸುವರ್ಣ ಕನ್ನಡ ಭವನದಲ್ಲಿ ನಿನ್ನೆ ನಡೆದ ತಾಲ್ಲೂಕು ಕಸಾಪ ಸರ್ವ ಸದಸ್ಯರ ಸಭೆ ಕೈಗೊಂಡಿದೆ.

ಕಸಾಪ ಹಿರಿಯ ಸದಸ್ಯ ಗಂಗಾಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸುವುದರ ಜೊತೆಗೆ ಜಿಲ್ಲೆಯ ಮತ್ತು ನಾಡಿನ ಎಲ್ಲಾ ಸಾಹಿತಿಗಳನ್ನೂ ಆಹ್ವಾನಿಸಲು ನಿರ್ಧರಿಸಲಾಯಿತು.

ಎರಡು ತಿಂಗಳೊಳಗೆ ತಾಲ್ಲೂಕಿನ ಪ್ರತೀ ಗ್ರಾಮದಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ರಚಿಸುವುದರ ಜೊತೆಗೆ ಮುಳ್ಳಯ್ಯನ ಗಿರಿಯಲ್ಲಿ ಕನ್ನಡ ಭುವನೇಶ್ವರಿಯ ಪ್ರತಿಮೆ ಮತ್ತು ಕನ್ನಡದ ಧ್ವಜ ಸ್ತಂಭವನ್ನು ಸ್ಥಾಪಿಸಲು ತೀರ್ಮಾನಿಸಿ ಅದರ ನಿರ್ಮಾಣದ ಉಸ್ತುವಾರಿಯನ್ನು ಜಿಲ್ಲಾ ಪ್ರಧಾನ ಸಂಚಾಲಕರಾದ ಗುರುವೇಶ್ ಹಾಗೂ ಮಗ್ಗಲಮಕ್ಕಿ ಗಣೇಶ್ ಅವರಿಗೆ ನೀಡಲಾಯಿತು.

ಇದೇ ವೇಳೆ ನೂತನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಅವರನ್ನು ಕಸಾಪ ಸದಸ್ಯರು ಸನ್ಮಾನಿಸಿ ಅಭಿನಂದಿಸಿದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸೂರಿ ಶ್ರೀನಿವಾಸ್ ನಾನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಲ್ಲ ನಾನೊಬ್ಬ ಕನ್ನಡದ ನುಡಿ ಸೇವಕನಾಗಿದ್ದು ದಯಮಾಡಿ ಎಲ್ಲರೂ ನನ್ನನ್ನು ಹಾಗೇ ಕರೆಯಬೇಕು ಎಂದು ಮನವಿ ಮಾಡಿದರು.

ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ಬಿ.ಪವನ್, ಎಸ್.ಎಸ್.ವೆಂಕಟೇಶ್, ಖಜಾಂಚಿ ಬಿ.ಪ್ರಕಾಶ್, ಹಿರಿಯ ಸದಸ್ಯರಾದ ಹೆಚ್.ಸಿ.ನಟರಾಜ್, ಗುರುವೇಶ್, ಪ್ರಭು ಸೂರಿ, ಓಂಕಾರಮೂರ್ತಿ, ಪಂಚಾಕ್ಷರಿ, ಲೋಕೇಶಪ್ಪ, ನೂರ್ ಅಹಮದ್, ಮಾವಿನಕೆರೆ ದಯಾನಂದ್, ಬಿ.ಆರ್.ಜಗದೀಶ್, ಭೈರೇಗೌಡ, ಕಡೂರು ತಾಲ್ಲೂಕು ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಜಯಕರ್ನಾಟಕ ಅಧ್ಯಕ್ಷ ಅನಿಲ್ ಕುಮಾರ್, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಬಿ.ಹೆಚ್.ಸೋಮಶೇಖರ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಕುಂದೂರು ಅಶೋಕ್, ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ಸಭೆಯಲ್ಲಿ ಪಾಲ್ಗೊಂಡಿದ್ದರು.