ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ ಸಿಎಂ ಇಬ್ರಾಹಿಂ.

86
firstsuddi

ಬೆಂಗಳೂರು : ಪರಿಷತ್ ವಿಪಕ್ಷ ನಾಯಕ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಕಾಂಗ್ರೆಸ್ ಎಂಎಲ್​ಸಿ ಸಿಎಂ ಇಬ್ರಾಹಿಂ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಕುಮಾರ್ ಗೂ ನಮಗೂ ಯಾವತ್ತು ಹೊಂದಾಣಿಕೆ ಆಗಲ್ಲ. ಅವರ ವಿಚಾರಧಾರೆಗಳು ನಮಗೆ ಆಗಲ್ಲ. ನಮಗೆ ಸಿದ್ದರಾಮಯ್ಯ ಜೊತೆ ಹೊಂದಾಣಿಕೆ ಇತ್ತು. ಆದರೆ ಕಾಂಗ್ರೆಸ್ ಗೂ ನನಗೂ ಮುಗಿದ ಅಧ್ಯಾಯವಾಗಿದೆ. ಸಿದ್ದರಾಮಯ್ಯ ಅವರಿಂದ ನಾನು ಕಾಂಗ್ರೆಸ್ ಗೆ ಹೋಗಿದ್ದೆ. ಸೋನಿಯಾ ಗಾಂಧಿ ಅವರು ನನ್ನ ಭಾರ ಇಳಿಸಿದ್ದಾರೆ. ನನ್ನ ಹಿತೈಷಿಗಳ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ಒಂದೇ ಬಾರಿಗೆ ಎಲ್ಲ ವಿಚಾರಗಳನ್ನು ಹೇಳುವುದಿಲ್ಲ. ಕಂತು ಕಂತಾಗಿ ಎಲ್ಲಾ ವಿಚಾರಗಳನ್ನು ಹೇಳುತ್ತೇನೆ. ಶೀಘ್ರದಲ್ಲೇ ನನ್ನ ನಿರ್ಧಾರವನ್ನು ತಿಳಿಸುತ್ತೇನೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲ್ತಿದ್ರು. ಇದು ತಿಳಿದು ಬಾದಾಮಿಯಲ್ಲಿ ನಾಮಪತ್ರ ಹಾಕಿಸಿದ್ದೆ. ಬಾದಾಮಿಯಲ್ಲಿ ಅವರು ಗೆದ್ದು ಶಾಸಕರು ಕೂಡ ಆದರು. ಅವರಿಗೆ ನಾನು ಹೊಸ ರಾಜಕೀಯ ಜೀವನ ಕೊಟ್ಟೆ. ಆದರೆ ಅವರು ನಮಗೆ ಇಂದು ಹೊಸ ಗಿಫ್ಟ್ ಕೊಟ್ಟಿದ್ದಾರೆ. ಅವರು ಕೊಟ್ಟ ಉಡುಗೊರೆ ಖುಷಿಯಿಂದ ಸ್ವೀಕರಿಸುವೆ ಎಂದು ತಿಳಿಸಿದರು.

ಸಿದ್ದರಾಮಯ್ಯಗಾಗಿ ಜೈಲಿಗೆ ಹೋಗಿ ಕಟ್ಟಿದ ಪಕ್ಷ ದಳ ಹಾಗೂ ದೇವೇಗೌಡರನ್ನು ಬಿಟ್ಟೆ. ಆದಷ್ಟು ಶೀಘ್ರವೇ ಎಂಎಲ್ ಸಿಗೆ ರಾಜೀನಾಮೆ ಕೊಡುತ್ತೇನೆ. ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಎಐಸಿಸಿ ನಿರ್ಧಾರ ನೋಡಿ ನನಗೆ ಸಂತೋಷ ಆಯಿತು. ಇದರಿಂದ ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಅವರಿಬ್ಬರ ವಿಚಾರಧಾರೆ ಒಂದೇ ಆಗಿರುವುದರಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ವ್ಯಂಗ್ಯವಾಡಿದರು.