ಕಾಂಗ್ರೆಸ್‍ಗೆ ಸುಳ್ಳೇ ಮನೆ ದೇವರು : ಸಿ ಟಿ ರವಿ ಟೀಕೆ…

144
firstsuddi

ಚಿಕ್ಕಮಗಳೂರು : ಕೋವಿಡ್ ಹಿನ್ನೆಲೆ ಇರುವುದರಿಂದ ಮೈ ಮರೆಯದೇ ಚುನಾವಣೆ ಎದುರಿಸಬೇಕು ಎಂದು ಚಿಕ್ಕಮಗಳೂರು ಶಾಸಕರು ಹಾಗೂ ಬಿಜೆಪಿ ರಾಷ್ಟೀಯ ಪ್ರಾಧಾನ ಕಾರ್ಯದರ್ಶಿಯೂ ಆದ ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಅವರು ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದರು. ಪಕ್ಷತೀತ ಚುನಾವಣೆ ಆಗಿರುವುದರಿಂದ ಯೋಗ್ಯರನ್ನು ಆಯ್ಕೆ ಮಾಡಿ ಎಂದವರು ಮತದಾರರಲ್ಲಿ ಮನವಿ ಮಾಡಿ ಊರಿನ ಸಮಸ್ಯೆ ಬಗೆಹರಿಸುವಂತಹ ಯೋಗ್ಯರನ್ನು ಆಯ್ಕೆ ಮಾಡಬೇಕೆಂದರು.
ಬಿ.ಜೆ.ಪಿ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಆದರೆ, ಪಕ್ಷದ ಚಿಹ್ನೆ ಇರುವುದಿಲ್ಲ. ಪಕ್ಷದ ಕಾರ್ಯಕರ್ತರು ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆಂದರು.
ಗ್ರಾಮ ಸ್ವರಾಜ್ಯ ಯಾತ್ರೆಯ ಮೂಲಕ ಬಿಜೆಪಿ ಈಗಾಗಲೇ ಚುನಾವಣೆ ಸಿದ್ಧತೆ ನಡೆಸಿದೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರುವ ವಿಶ್ವಾಸವೂ ತಮಗಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ಸಿಗೆ ಇರುವ ಪಟ್ಟವನ್ನು ಇನ್ಯಾರು ಕಿತ್ತುಕೊಳ್ಳಲು ಆಗುವುದಿಲ್ಲ.
ಕಾಂಗ್ರೆಸ್‍ಗೆ ಬಂದ ನಂತರ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಾಠವನ್ನೆ ಕಲಿಯುತ್ತಿದ್ದಾರೆ. ಸತ್ಯವನ್ನು ನಂಬದೇ ಇರುವವರಿಗೆ ಸತ್ಯವೆಲ್ಲಾ ಸುಳ್ಳಾಗಿ ಕಾಣುತ್ತದೆ. ಸತ್ಯವನ್ನು ನಂಬುವ ಸ್ವಭಾವ ಕಾಂಗ್ರೆಸ್‍ನವರಿಗೆ ಇಲ್ಲ ಹಾಗೂ ಸುಳ್ಳು ಹೇಳುವುದರಲ್ಲಿ ಅವರಿಗಿಂತ ನಿಸ್ಸೀಮರು ಯಾರು ಇಲ್ಲ ಎಂದು ಟೀಕಿಸಿದರು.
ಮೋದಿ, ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್‍ಗೆ ಸುಳ್ಳೆ ‘ಮನೆ ದೇವರು’ ಆ ಕಾಂಗ್ರೆಸ್ ಗೆ ಹೋದ ಸಿದ್ದರಾಮಯ್ಯ ಅವರು ಸಹ ಸುಳ್ಳನ್ನೆ ಮನೆ ದೇವರಾಗಿ ಮಾಡಿಕೊಂಡಿದ್ದಾರೆ. ಸಿಎಎ ವಿರುದ್ಧ ಭಯ ಹುಟ್ಟಿಸಿ ಮುಸ್ಲೀಮರನ್ನು ಬೀದಿಗೆ ಇಳಿಸಿದ್ದರು. ಕೇಂದ್ರದ ನೂತನ ಕೃಷಿ ಕಾಯ್ದೆಯ ಬಗ್ಗೆಯೂ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ನೂತನ ಕೃಷಿ ಕಾಯ್ದೆ ರೈತರ ಬದುಕನ್ನು ಕಿತ್ತುಕೊಳ್ಳುತ್ತದೆ ಎಂದು ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದು ತಿಳಿಸಿದರು.
ತಮಿಳು ನಾಡಿನ ನಟ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವ ಕುರಿತು ಮಾತನಾಡಿ, ರಜನಿಕಾಂತ್ ರಾಜಕೀಯ ಎಂಟ್ರಿ ಕೊಡುತ್ತಾರೆ ಅನ್ನುವುದು ಹತ್ತು ವರ್ಷದಿಂದ ಕೇಳಿ ಬರುತ್ತಿರುವ ವಿಷಯವಾಗಿದೆ. ಅವರು ನಿರ್ಣಯ ಮಾಡದೇ ನಾವು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ರಾಜಕೀಯಕ್ಕೆ ಬರುವ ಬಗ್ಗೆ ರಜನಿಕಾಂತ್ ಅವರೇ ನಿರ್ಣಯ ಮಾಡಲಿ .ಅವರ ನಿರ್ಣಯ ಪ್ರಕಟವಾದ ಮೇಲೆ ಸನ್ನಿವೇಶ, ಸಂದರ್ಭ ನೋಡಿ ಮುಂದಿನ ತೀರ್ಮಾನ ನಾವು ಪ್ರಕಟಿಸುತ್ತೇವೆ ಎಂದ ರವಿ ಅವರು, ನಾನು ವೈಯಕ್ತಿಕವಾಗಿ ಅವರ ಜೊತೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.