ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ…

57
firstsuddi

ನವದೆಹಲಿ: ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸೋನಿಯಾ ಗಾಂಧಿ ಅವರಿಂದ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. 24 ವರ್ಷಗಳ ನಂತರ ಈ ಹುದ್ದೆಯನ್ನು ಅಲಂಕರಿಸುತ್ತಿರುವ ಮೊದಲ ಗಾಂಧಿಯೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಪಾತ್ರರಾಗಿದ್ದಾರೆ. ಈ ಸಮಾರಂಭದಲ್ಲಿ ಕೆಸಿ ವೇಣುಗೋಪಾಲ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಇದು ನನ್ನ ಪಾಲಿನ ಭಾವುಕ ದಿನವಾಗಿದೆ, ಕಾರ್ಮಿಕನೊಬ್ಬನ ಮಗ ಹಾಗೂ ಸಾಮಾನ್ಯ ಕಾರ್ಯಕರ್ತನಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ನೀಡಿದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಇನ್ನೂ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಸೋನಿಯಾ ಗಾಂಧಿ, ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ನನ್ನ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಬದಲಾವಣೆ ಜಗದ ನಿಯಮ. ಕಾಂಗ್ರೆಸ್ ಈ ಹಿಂದಿನ ವರ್ಷಗಳಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಮುಂದಿನ ದಿನಗಳಲ್ಲೂ ನಾವು ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗುತ್ತೇವೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.