ರಾಮನಗರ : ಮಾಗಡಿ ತಾಲೂಕಿನ ಕಂಚುಗಲ್ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಸವಲಿಂಗ ಶ್ರೀಗಳಿಗೆ ಮಹಿಳೆಯೊಬ್ಬರ ಮೂಲಕ ಹನಿಟ್ರ್ಯಾಪ್ ಮಾಡಿ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಇದರಿಂದ ಒತ್ತಡಕ್ಕೆ ಸಿಲುಕಿದ್ದ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಪೊಲೀಸ್ ತನಿಖೆ ವೇಳೆ ಕಂಡುಬಂದಿದೆ.
ಮೂರು ದಿನಗಳ ಹಿಂದೆ ಬಂಡೆಮಠದ ಶ್ರೀಗಳ ಮೃತದೇಹ ಮಠದ ಕೊಠಡಿಯೊಂದರಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರು ಡೆತ್ ನೋಟ್ ಕೂಡಾ ಬರೆದಿದ್ದು, ಅದರಲ್ಲಿ ಹಲವರ ಹೆಸರನ್ನು ಬರೆದಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿ ಕುದೂರು ಪೊಲೀಸರು ಯಾವೊಬ್ಬ ವ್ಯಕ್ತಿಯ ಹೆಸರು ಎಫ್ಐಆರ್ ನಲ್ಲಿ ದಾಖಲಿಸಿಕೊಂಡಿಲ್ಲ. ಇದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅಲ್ಲದೇ ಬೆಂಗಳೂರು ಮೂಲದ ಮಹಿಳೆಯೊಬ್ಬರು ಸ್ವಾಮೀಜಿ ಬಳಿ ಆರಂಭದಲ್ಲಿ ಕಷ್ಟ ಹೇಳಿಕೊಂಡು ನಂತರ ಸ್ವಾಮೀಜಿ ಜೊತೆ ಸಲುಗೆ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಬಸವಲಿಂಗ ಸ್ವಾಮೀಜಿ ಮಹಿಳೆಯ ಮಾತಿಗೆ ಮರುಳಾಗಿದ್ದರು. ಕಳೆದ 6 ತಿಂಗಳಿಂದ ಆ ಮಹಿಳೆಯ ಸಂಪರ್ಕದಲ್ಲಿ ಸ್ವಾಮೀಜಿ ಇದ್ದರು ಎಂಬ ಮಾತುಗಳೂ ಕೇಳಿಬರುತ್ತಿವೆ. ಸದ್ಯ ಸ್ವಾಮೀಜಿ, ಮಹಿಳೆಯೊಂದಿಗೆ ವೀಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಟ್ಟಾರೆ ಬಸವಲಿಂಗ ಸ್ವಾಮೀಜಿಯ ಆತ್ಮಹತ್ಯೆ ಹಿಂದಿನ ಸತ್ಯಾಸತ್ಯತೆ ತನಿಖೆ ಬಳಿಕವಷ್ಟೇ ತಿಳಿದುಬರಬೇಕಾಗಿದೆ.










