ಕಾಂಗ್ರೆಸ್ ತತ್ವ, ಸಿದ್ಧಾಂತ ಒಪ್ಪಿಕೊಂಡು ಸೇರ್ಪಡೆಯಾಗಿದ್ದೇನೆ : ಜಗದೀಶ್ ಶೆಟ್ಟರ್

54
firstsuddi

ಬೆಂಗಳೂರು: ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಸೇರ್ಪಡೆಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ನಾನು ಪ್ರಮುಖ. ನಾನು ಜನಸಂಘ, ಸಂಘ ಪರಿವಾರದಿಂದ ಬಂದ ವ್ಯಕ್ತಿ, ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದೇವೆ. ಇಂದು ಬಹಳಷ್ಟು ಜನಕ್ಕೆ ಆಶ್ಚರ್ಯವಾಗಿದೆ. ಸಿಎಂ, ಪ್ರತಿಪಕ್ಷದ ನಾಯಕನಾಗಿ ಪಕ್ಷದ ಅಧ್ಯಕ್ಷನಾಗಿದ್ದ ವ್ಯಕ್ತಿ ಏಕೆ ಪಕ್ಷ ಬಿಡ್ತಿದ್ದಾರೆ ಅಂತಾ ಎಲ್ಲರೂ ಕೇಳುತ್ತಿದ್ದಾರೆ. ಆದರೆ ನನಗೆ ಬಹಳ ಬೇಜಾರಾಗಿದೆ ಎಂದು ಹೇಳಿದರು.

ಬಿಜೆಪಿಯೂ ಎಲ್ಲಾ ಸ್ಥಾನಮಾನ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ನಾನೂ ಬಿಜೆಪಿ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೇನೆ. 6 ಬಾರಿ ನಿರಂತರವಾಗಿ ಗೆದ್ದಿದ್ದೇನೆ. 7ನೇ ಬಾರಿ ಸ್ಪರ್ಧೆ ಮಾಡಬೇಕಾಗಿದೆ. ಸಹಜವಾಗಿ ಟಿಕೆಟ್ ಇಲ್ಲ ಅಂದಾಗ ಆಘಾತವಾಯ್ತು. ಹಿರಿಯ ನಾಯಕನಾಗಿ ನನಗೆ ಗೌರವ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಅಧಿಕಾರದ ಆಸೆಗಾಗಿ ಬಿಜೆಪಿ ಪಕ್ಷ ತೊರೆದಿಲ್ಲ, ಕಳೆದ 6 ತಿಂಗಳಿಂದ ಒಂದು ರೀತಿಯ ವೇದನೆ. ಕೊನೆಗಳಿಗೆಯಲ್ಲಿ ನಿಮಗೆ ಹಾಗೂ ಈಶ್ವರಪ್ಪಗೆ ಟಿಕೆಟ್ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ತಿಳಿಸಿತ್ತು. ಕೆಲ ತಿಂಗಳ ಹಿಂದೆ ಸಾಮಾನ್ಯ ಕಾರ್ಯಕರ್ತನಿಗೆ, ಚಿಕ್ಕ ಹುಡುಗನಿಗೆ ಹೇಳುವ ರೀತಿಯಲ್ಲಿ ನಿಮಗೆ ಮತ್ತು ಈಶ್ವರಪ್ಪಗೆ ಟಿಕೆಟ್ ಇಲ್ಲ ಎಂದು ಹೇಳಿದರು. ಒಬ್ಬ ಹಿರಿಯ ನಾಯಕನಿಗೆ ಹೇಳುವ ರೀತಿನಾ ಇದು. ಬಹಳ ಬೇಜಾರಾಯ್ತು ಎಂದರು.

ಪಕ್ಷ ಮುಖ್ಯ ಅಂತಾ ಕಟ್ಟಿ ಬೆಳೆಸಿದವರು ನಾವು. ಆದರೆ ಬಿಜೆಪಿಯಲ್ಲಿ ಇವತ್ತು ರಾಜ್ಯದಲ್ಲಿ ಪಕ್ಷಕ್ಕಿಂತಲೂ ಕೆಲವೇ ಕೆಲವು ವ್ಯಕ್ತಿಗಳು ಮುಖ್ಯವಾಗಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿಯು ನನ್ನ ಜನತೆಯ ಸ್ವಾಭಿಮಾನಕ್ಕೆ ಹಾಗೂ ಜಗದೀಶ್ ಶೆಟ್ಟರ್ ಸ್ವಾಭಿಮಾನಕ್ಕೂ ಪೆಟ್ಟು ಕೊಟ್ಟಿದೆ. ಕಟ್ಟಿ ಬೆಳೆಸಿದ ಪಕ್ಷದಿಂದ ಹೊರಹಾಕಿದರು. ಈ ವೇಳೆ ಕಾಂಗ್ರೆಸ್ ನಾಯಕರು ನನ್ನ ಸಂಪರ್ಕ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ಕೊಟ್ಟರು. ನನಗೆ ಬೇರೆ ದಾರಿಯಿರಲಿಲ್ಲ. ಕಾಂಗ್ರೆಸ್‍ಗೆ ಸೇರ್ಪಡೆಯಾದೆ ಎಂದು ಹೇಳಿದರು.

ನಾನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಟೀಕೆ ಮಾಡುತ್ತಿಲ್ಲ. ಇಲ್ಲಿನ ಕೆಲವರು ತಮ್ಮ ಹಿತಾಸಕ್ತಿಗಾಗಿ ಹೀಗೆ ಮಾಡುತ್ತಿದ್ದಾರೆ. ನಮ್ಮ ಕುಟುಂಬದವರಿಗೆ ಟಿಕೆಟ್ ಬೇಡ ಎಂದು ಮೊದಲ ದಿವಸವೇ ಹೇಳಬಹುದಿತ್ತು. ಆದರೆ ನಾಮಪತ್ರ ಸಲ್ಲಿಸಲು ಕೆಲವೇ ದಿನಗಳಿದ್ದಾಗ ತಿಳಿಸಿರುವುದು ನನಗೆ ಬೇಸರ ತರಿಸಿದೆ. ಆದರೆ ನನಗೆ ಅಧಿಕಾರ ಬೇಡವಾಗಿತ್ತು. ನನಗೆ ಮಂತ್ರಿ ಬೇಡ ಅಂತಾ ಎಂದು ಹೇಳಿದ್ದೆ. ಆದರೆ ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು. ಲಿಂಗಾಯತ ನಾಯಕರಲ್ಲಿ ಬಿಎಸ್​ವೈ ಬಿಟ್ಟರೆ ನಾನೇ ಹಿರಿಯ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿರಬೇಕು ಎಂದು ಆರೋಪಿಸಿದರು.