ಬೆಂಗಳೂರು : ಬಿಜೆಪಿ ಸರ್ಕಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಟೆಂಡರ್ ಅಕ್ರಮ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್ ಗಾಳಿಯಲ್ಲಿ ಗುಂಡು ಹಾರಿಸುತ್ತಿದೆ. ತಮ್ಮ ಅಡಳಿತದ ಅನುಭವವನ್ನು ಹೇಳುತ್ತಿದೆ. ಎಲ್ಲಿ ಅಕ್ರಮ ಆಗಿದೆ, ಯಾರು ಅಕ್ರಮ ಮಾಡಿದ್ದಾರೆ, ದಾಖಲೆ ಸಮೇತ ಎಲ್ಲವನ್ನೂ ನಮ್ಮ ಮುಂದಿಡಲಿ. ಎಲ್ಲಿಗೆ ಬೇಕಾದರೂ ದೂರು ಕೊಡಲಿ, ತನಿಖೆ ಮಾಡಿಸಲು ನಾವು ರೆಡಿ ಇದ್ದೇವೆ ಎಂದು ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ಮೇಲೆ ಎಂತಹ, ಯಾವೆಲ್ಲಾ ಆರೋಪಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೊದಲು ಅವರು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡು ರಕ್ಷಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಇನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕರು ಹುಚ್ಚರು, ತಲೆ ತಿರುಕರು, ತಲೆ ಸರಿ ಇದ್ದವರು ಈ ರೀತಿ ಮಾತನಾಡೋದಿಲ್ಲ, ಅಧಿಕಾರದ ಭ್ರಮೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಅಂತಾ ಕನಸು ಕಾಣ್ತಿದ್ದಾರೆ. ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಸದನದಲ್ಲಿ ಕಾಂಗ್ರೆಸ್ ನವರು ಪ್ರಸ್ತಾಪ ಮಾಡಲಿ, ಅದಕ್ಕೆ ನಾವು ತಕ್ಕ ಉತ್ತರವನ್ನು ಕೊಡುತ್ತೇವೆ ಎಂದರು.










